ಪಿಟಿಸಿಎಲ್ ಕಾಯ್ದೆ ಹಕ್ಕನ್ನು ಮರು ಸ್ಥಾಪಿಸಲು ಕೋರಲಾಗದು:  ರಾಜ್ಯ ಹೈಕೋರ್ಟ್ ಸ್ಪಷ್ಟನೆ

highcourt
Published on

ಬೆಂಗಳೂರು: ಸರ್ಕಾರದಿಂದ ಮಂಜೂರಾದ ಜಮೀನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗವಣೆ ನಿಷೇಧ) ಕಾಯ್ದೆಯಡಿ (ಪಿಟಿಸಿಎಲ್) ಜಮೀನಿನ ಹಕ್ಕು ಪುನರ್ ಸ್ಥಾಪಿಸಲು ಕೋರಿದ್ದ ಅರ್ಜಿ ವಜಾಗೊಂಡಲ್ಲಿ, ಅದೇ ಜಮೀನಿಗೆ ಸಂಬಂಧಿಸಿದಂತೆ ಮತೊಮ್ಮೆ ಹಕ್ಕು ಮರು ಸ್ಥಾಪಿಸುವಂತೆ ಕೋರಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣ ಸಂಬಂಧ ಚನ್ನಗಿರಿ ತಾಲೂಕಿನ ಮಂಗೇನಹಳ್ಳಿಯ ಚಂದ್ರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕ ಸದಸ್ಯ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಅರ್ಜಿದಾರರಿಗೆ 1962ರಲ್ಲಿ ಸರ್ಕಾರದಿಂದ ಮಂಜೂರಾದ ಜಮೀನನ್ನು 1964ರಲ್ಲಿ ಮಾರಾಟ ಮಾಡಿದ್ದಾರೆ. ಇದಾದ ಬಳಿಕ 1992ರ ಅ.16ರಂದು ಜಮೀನಿನ ಹಕ್ಕನ್ನು ಪುನರ್ ಸ್ಥಾಪಿಸುವಂತೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿ ವಜಾಗೊಳಿಸಲಾಗಿದೆ.

ಈ ಆದೇಶವನ್ನು ಸಂಬಂಧಪಟ್ಟ ಪ್ರಾಧಿಕಾರದಲ್ಲಿ ಪ್ರಶ್ನಿಸಿ ಇತ್ಯರ್ಥಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆ ನಡೆಸದ ಪರಿಣಾಮ ಉಪವಿಭಾಗಾಧಿಕಾರಿಗಳ ಆದೇಶಕ್ಕೆ ಸಮ್ಮತಿ ಸೂಚಿಸಿದಂತಾಗಲಿದ್ದು, ಉಪವಿಭಾಗಾಧಿಕಾರಿಗಳ ಆದೇಶ ಅನುಷ್ಠಾನಗೊಂಡಂತಾಗಿದೆ. ಆದ್ದರಿಂದ ಜಮೀನಿನ ಹಕ್ಕನ್ನು ಪುನರ್ ಸ್ಥಾಪಿಸುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸುವ ಹಕ್ಕನ್ನು ಚಂದ್ರಪ್ಪ ಕಳೆದು ಕೊಂಡಿದ್ದಾರೆಂದು ಪೀಠ ತಿಳಿಸಿದೆ.

ಆದರೆ, ಈ ಅಂಶವನ್ನು ಬಹಿರಂಗಪಡಿಸದೆ ಪುನಃ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿದ್ದಾರೆ. ಇದು ಸತ್ಯಾಂಶವನ್ನು ಮುಚ್ಚಿಟ್ಟಂತಾಗಿದೆ ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಈ ಪ್ರಕರಣದಲ್ಲಿ ದಾಖಲೆಗಳ ಕೊರತೆಯಿಂದ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಒಂದೇ ಭೂಮಿಯ ಮೇಲೆ ಅನೇಕ ವಿಚಾರಣೆಗಳನ್ನು ನಡೆಸಿದ್ದಾರೆ. ಆದ್ದರಿಂದ ಈ ರೀತಿಯ ಪ್ರಕರಣಗಳಲ್ಲಿ ಜಮೀನಿನ ದಾಖಲೆಗಳನ್ನು (ಅರ್ಜಿದಾರರಿಗೆ ಮಂಜೂರಾದ ಪ್ರತಿ, ಮಾರಾಟ ಮಾಡಿದ ವಿವರ, ಆರ್‌ಟಿಸಿ, ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದ ಅರ್ಜಿ, ಈ ಅರ್ಜಿ ವಜಾಗೊಂಡಿರುವ ಮಾಹಿತಿ) ಡಿಜಿಟಲೀಕರಣಗೊಳಿಸಿ ಅದಕ್ಕೆ ಎಲ್ಲ ದಾಖಲೆಗಳನ್ನು ಪರಸ್ಪರ ಜೋಡಣೆ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net