ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ

satyanaryana pooja
ಮಳಲೂರಮ್ಮ ದೇವಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯೆ ಚಾಂದಿನಿ ಉದ್ಘಾಟಿಸಿದರು. ಗುರುಸಜ್ಜನ್, ಕೊರಗಪ್ಪ ಪೂಜಾರಿ, ಎಂ.ಜೆ.ಸಂದೀಪ್, ಚಂದ್ರಮೌಳಿ ಇತರರಿದ್ದರು.
Published on

ಚಿಕ್ಕಮಗಳೂರು: ಧರ್ಮಸ್ಥಳ ಯೋಜನೆಯ ಸಂಘದ ಸದಸ್ಯರಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನಾ ಶಕ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ಕುಟುಂಬಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ ಎಂದು ಪಿಎಸ್‌ಐ ಗುರುಸಜ್ಜನ್ ತಿಳಿಸಿದರು.
ಮಲ್ಲಂದೂರು ಸಮೀಪದ ಮಳಲೂರಮ್ಮ ದೇವಾಲಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಟ್ರಸ್ಟ್, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ಮತ್ತು ಗ್ರಾಮಕ್ಕೆ ಶ್ರೇಯಸ್ಸಾಗುತ್ತದೆ. ಎಲ್ಲರೂ ಹೊಂದಾಣಿಕೆಯಿಂದ ಬಾಳುವಂತೆ ಪ್ರೇರೇಪಣೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಒಗ್ಗಟ್ಟಿಗೆ, ಯಶಸ್ಸಿಗೆ, ಸಮಾನತೆಗೆ ಈ ಕಾರ್ಯಕ್ರಮ ಸಹಕಾರಿ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಮೂಡಿಬಂದಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರಿರುವುದಕ್ಕೆ ಸಂಘಟನಾಶಕ್ತಿ, ಹೊಂದಾಣಿಕೆ ಮುಖ್ಯ ಎಂದು ತಿಳಿಸಿದರು. ಜೋಳದಾಳಿನ ನಿವೃತ್ತ ಪ್ರಾಚಾರ್ಯೆ ಚಾಂದಿನಿ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮೂಲಕ ಜನರಲ್ಲಿ ಧಾರ್ಮಿಕತೆಯ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ನಡೆಸುತ್ತ ಬರುತ್ತಿದೆ. ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಎಂ.ಜೆ.ಸಂದೀಪ್, ಧಾರ್ಮಿಕ ಚಿಂತಕ ಚಂದ್ರಮೌಳಿ, ದೇವಾಲಯದ ಅರ್ಚಕ ರಾಜಣ್ಣಗೌಡ, ಮೇಲ್ವಿಚಾರಕ ಮರುಳೇಶ್, ಸುಗುದೇವ್, ಆವತಿ ಬಿ. ಒಕ್ಕೂಟದ ಅಧ್ಯಕ್ಷೆ ಶೋಭಾ, ಬ್ಯಾರವಳ್ಳಿ ಒಕ್ಕೂಟದ ಅಧ್ಯಕ್ಷ ಜಿ.ಎನ್.ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net