ವಸತಿ ಒದಗಿಸುವುದು ಶ್ರೇಷ್ಠವಾದ ಕೆಲಸ

sgr (2)
ಸಾಗರದ ಅರಮನೆಕೇರಿಯಲ್ಲಿ ಶುಕ್ರವಾರ ಸಫಾಬೈತುಲ್ ಸಂಸ್ಥೆಯಿಂದ ನಿರ್ಮಿಸಿದ ಮನೆಯನ್ನು ಬಡಮಹಿಳೆ ಪ್ಯಾರಿಜಾನ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಸ್ತಾಂತರಿಸಿದರು. ಆರ್.ಎ.ಕೆ.ಫಯಾಜ್, ಮೌಲಾನಾ ಸಫೀವುಲ್ಲಾ, ಇರ್ಷಾದ್ ಆಲಿಖಾನ್, ಬಾಷಾ ಸಾಬ್ ಇತರರಿದ್ದರು.
Published on

ಸಾಗರ: ಕಾಂಗ್ರೆಸ್ ಸರ್ಕಾರ ವಸತಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರುತ್ತದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಸೂರಿಲ್ಲದ ಬಡವರಿಗೆ ಮನೆ ನಿರ್ಮಿಸಿಕೊಡುವ ಕೆಲಸ ಶ್ರೇಷ್ಠವಾದುದು. ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಅರಮನೆಕೇರಿಯಲ್ಲಿ ಶುಕ್ರವಾರ ಸಫಾಬೈತುಲ್ ಸಂಸ್ಥೆಯಿಂದ ಬಡಮಹಿಳೆ ಪ್ಯಾರಿಜಾನ್ ಅವರಿಗೆ ನಿರ್ಮಿಸಿಕೊಟ್ಟಿರುವ 4 ಲಕ್ಷ ರೂ. ವೆಚ್ಚದ ಮನೆ ಹಸ್ತಾಂತರಿಸಿ ಮಾತನಾಡಿದರು.

ಸಂಸ್ಥೆ ಎಲ್ಲ ವರ್ಗದ ಮಹಿಳೆಯರಿಗೆ ವಿವಿಧ ತರಬೇತಿ ನೀಡಿದೆ. ಜತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸೌಲಭ್ಯ, ಕರೊನಾದಂತಹ ಸಂದರ್ಭ ಉಚಿತ ದಿನಸಿ ಕಿಟ್ ನೀಡಿದೆ. ಸಿರಿ ಬಂದ ಕಾಲಕ್ಕೆ ಕರೆದು ದಾನ ಮಾಡುವುದು ಮಾನವೀಯತೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಎಂದರು.

ಸಂಸ್ಥೆ ಅಧ್ಯಕ್ಷ ಮೌಲಾನ ಕಲೀಮುಲ್ಲಾ ಮಾತನಾಡಿ, ನಮ್ಮ ಸಂಸ್ಥೆ ಅನೇಕ ಸಾಮಾಜಿಕ ಕೆಲಸ ಮಾಡುತ್ತ ಬರುತ್ತಿದೆ. ಹದಿನೈದು ವಿಭಾಗಗಳಲ್ಲಿ ವಿವಿಧ ಸಾಮಾಜಿಕ ಕೆಲಸ ನಡೆಯುತ್ತಿದೆ. ಪ್ರತಿ ತಿಂಗಳು 100 ವೃದ್ಧರಿಗೆ ವೃದ್ಧಾಪ್ಯ ವೇತನ ನೀಡುತ್ತಿದೆ. ಈತನಕ ಆರು ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಚಟುವಟಿಕೆ ನಡೆಸಲಾಗುತ್ತದೆ ಎಂದರು.

ಸಾಗರ ಪುರಸಭೆ ಮಾಜಿ ಉಪಾಧ್ಯಕ್ಷ ಮಕ್ಬೂಲ್ ಅಹ್ಮದ್ ಮಾತನಾಡಿ, ಸಫಾ ಬೈತುಲ್ ಒಂದು ಸಾಮಾಜಿಕ ಸಂಘಟನೆ. ಎಲ್ಲ ವರ್ಗದ ಏಳಿಗೆಗಾಗಿ ಸಂಸ್ಥೆ ಕೆಲಸ ಮಾಡುತ್ತಿದೆ. ಅದರ ಒಂದು ಭಾಗವಾಗಿ ಸೂರಿಲ್ಲದವರಿಗೆ ವಸತಿ ನಿರ್ಮಿಸಿಕೊಡುವುದಾಗಿದೆ ಎಂದರು.

ಪ್ರಮುಖರಾದ ಆರ್.ಎ.ಕೆ. ಫಯಾಜ್, ಮೌಲಾನಾ ಸಫೀವುಲ್ಲಾ, ಇರ್ಷಾದ್ ಆಲಿಖಾನ್, ಬಾಷಾ ಸಾಬ್, ಫಾರೂಕ್, ಮೋಸಿನ್, ಹನ್ೀ ಶೇಕ್, ರಹೀಂ ಸಾಬ್, ಲಲಿತಮ್ಮ, ಜಾಕೀರ್, ಮಧುಮಾಲತಿ, ಗಣಪತಿ ಮಂಡಗಳಲೆ, ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net