

ಹನೂರು: ತಾಲೂಕಿನಲ್ಲಿ ಕುಡಿಯುವ ನೀರಿನ ಸಂಪರ್ಕವಿಲ್ಲದ 110 ಅಂಗನವಾಡಿ ಕೇಂದ್ರಗಳಿಗೆ ಒಂದು ವಾರದೊಳಗೆ ನೀರು ಪೂರೈಕೆಯಾಗಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೂ ಆದ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಲಕ್ಷ್ಮೀ ಎಚ್ಚರಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ಮಕ್ಕಳಿಗೆ ಉತ್ತಮ ಕಟ್ಟಡವನ್ನು ಒದಗಿಸುವುದರ ಮೂಲಕ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಆದರೆ ತಾಲೂಕು ವ್ಯಾಪ್ತಿಯ ಮಹಾಲಿಂಗನಕಟ್ಟೆ, ಬಿದರಹಳ್ಳಿ, ಕರಿಯಪ್ಪನದೊಡ್ಡಿ, ಹುಣಸೆಪಾಳ್ಯ, ದೊಡ್ಡಾಣೆ, ಗುಂಡಾಪುರ, ಗೊರಸಾಣೆ, ದಿನ್ನಳ್ಳಿ, ಪೊನ್ನಾಚಿ, ಮರೂರು ಹಾಗೂ ಇನ್ನಿತರ ಕಡೆಗಳಲ್ಲಿ ಅಪೂರ್ಣವಾಗಿರುವ ಅಂಗನವಾಡಿ ಕೇಂದ್ರದ ಕಟ್ಟಡಗಳ ಬಗ್ಗೆ ಗಮನಹರಿಸಿ ಇನ್ನು 2 ತಿಂಗಳೊಳಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು. ಹಾಗೆಯೇ ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ತಯಾರಿಸಲು ನೀರು ಮುಖ್ಯ, ಆದರೆ ತಾಲೂಕಿನಲ್ಲಿ 110 ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸೌಕರ್ಯ ಇಲ್ಲದಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಮಕ್ಕಳಿಗೆ ತೊಂದರೆಯಾಗಲಿದೆ. ಆದ್ದರಿಂದ ಪಿಡಿಒಗಳು ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ನೀರಿನ ಸೌಕರ್ಯ ಒದಗಿಸಲು ಮುಂದಾಗಬೇಕು. ಇದರಲ್ಲಿ ಅಡುಗೆ ಕೋಣೆ ಹಾಗೂ ಶೌಚಗೃಹಕ್ಕೆ ಪತ್ಯೇಕ ವ್ಯವಸ್ಥೆಯಾಗಬೇಕು. ಈ ಕೆಲಸ ಒಂದು ವಾರದೊಳಗೆ ಆಗಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ತಪ್ಪಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜತೆಗೆ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನಾಧಿಕಾರಿ ನಂಜಮಣಿ ಅವರಿಗೆ ಸೂಚಿಸಿದರು.
ಫಲಿತಾಂಶ ಸುಧಾರಣೆಗೆ ವಿಶೇಷ ಗಮನ:ಜಿಲ್ಲೆಯಲ್ಲಿಯೇ ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದ ಹನೂರು ಶೈಕ್ಷಣಿಕ ವಲಯ ಕಳೆದ ವರ್ಷ ಕೊನೆಯ ಸ್ಥಾನ ತಲುಪಿರುವುದು ನಿಜಕ್ಕೂ ದುರದೃಷ್ಟಕರ. ಹಾಗಾಗಿ ಫಲಿತಾಂಶ ಸುಧಾರಣೆಗೆ ವಿಶೇಷ ಗಮನಹರಿಸುವುದು ಅಗತ್ಯವಾಗಿದೆ. ಈ ಬಗ್ಗೆ ನಾನೇ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗುವುದು. ಈ ದೆಸೆಯಲ್ಲಿ ಪ್ರತಿ ವಾರಕ್ಕೊಮ್ಮೆ ಹನೂರಿಗೆ ಭೇಟಿ ನೀಡಲಾಗುವುದು.ಹಾಗಾಗಿ ನನ್ನ ಅಧ್ಯಕ್ಷತೆಯಲ್ಲಿ ಮುಖ್ಯ ಶಿಕ್ಷಕರ ಸಭೆಯಾಗಬೇಕು. ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ ತರಗತಿಗಳಾಗಬೇಕು. ವಿಷಯವಾರು ಪ್ರಶ್ನಾಕೋಠಿ ತಯಾರಾಗಬೇಕು. ಪ್ರತಿನಿತ್ಯ ವಿಶೇಷ ತರಗತಿಗಳನ್ನು ಕೈಗೊಳ್ಳಬೇಕು ಹಾಗೂ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಕೈಗೊಂಡು ಫಲಿತಾಂಶವನ್ನು ಸುಧಾರಿಸಬೇಕಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಬಿಇಒ ಗುರುಲಿಂಗಯ್ಯ ಅವರಿಗೆ ಸೂಚಿಸಿದರು.
782 ಮಕ್ಕಳಿಗೆ ಆಧಾರ್‌ಕಾರ್ಡ್ ಇಲ್ಲ: ಬಿಇಒ ಗುರುಲಿಂಗಯ್ಯ ಮಾತನಾಡಿ, ಜನನ ಪ್ರಮಾಣ ಪತ್ರ ಇಲ್ಲದ ಪರಿಣಾಮ ಶೈಕ್ಷಣಿಕ ವಲಯದ 782 ಮಕ್ಕಳಿಗೆ ಅಧಾರ್ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹಾಗೂ ಇನ್ನಿತರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಮಸ್ಯೆಯಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಲಕ್ಷ್ಮೀ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನಾಯಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರಲ್ಲದೆ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರಿಗೆ ಈ ಬಗ್ಗೆ ಜನನ ಪ್ರಮಾಣ ನೀಡಲು ಕ್ರಮವಹಿಸುವಂತೆ ಸೂಚಿಸಿದರು.
ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಿ: ಬೀದಿ ನಾಯಿಗಳ ಕಡಿತದಿಂದ ರೇಬಿಸ್ ರೋಗ ತಗುಲಲಿದ್ದು, ಮೃತಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಸಮೀಕ್ಷೆ ನಡೆದಿದ್ದು, ಹನೂರು ತಾಲೂಕಿನಲ್ಲಿ ಸುಮಾರು 4 ಸಾವಿರ ಬೀದಿ ನಾಯಿಗಳಿವೆ. ಆದ್ದರಿಂದ ಈ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಅತಿ ತುರ್ತಾಗಿ ಆಗಬೇಕಿದೆ. ಇದರಲ್ಲಿ ಯಾರು ಸಹ ನಿರ್ಲಕ್ಷ್ಯ ವಹಿಸುವಂತಿಲ್ಲ. ಪಿಡಿಒಗಳ ಸಹಕಾರ ಪಡೆದು ಶೀಘ್ರದಲ್ಲೇ ಶಿಬಿರವನ್ನು ಆಯೋಜಿಸಬೇಕು ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು ಅವರಿಗೆ ತಿಳಿಸಿದರು.
ಸಂವಿಧಾನ ದಿನ ಆಚರಿಸಬೇಕು: ಇನ್ನು ಸಭೆಯಲ್ಲಿ ಸರ್ಕಾರಿ ಶಾಲೆಗಳ ಆಸ್ತಿಗಳ ಇ-ಸ್ವತ್ತು, ಕಸ ವಿಲೇವಾರಿ ನಿರ್ವಹಣಾ ಘಟಕಕ್ಕೆ ಸ್ಥಳ, ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತಲ್ಲದೆ ನ.26 ರಂದು ಸಂವಿಧಾನ ದಿನಾಚರಣೆ ಹಿನ್ನೆಲೆ ಸರ್ಕಾರಿ ಶಾಲೆ, ಕಚೇರಿಗಳು ಹಾಗೂ ಪಂಚಾಯಿತಿಗಳಲ್ಲಿ ಸಂವಿಧಾನದ ಪ್ರಸ್ತಾಪನೆ ಓದುವಂತಾಗಬೇಕು. ಈ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಾಪಂ ಇಒ ಉಮೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಧನ್ವನಾಗ್, ಪೂರ್ಣಿಮಾ, ಆರ್‌ಎಫ್‌ಒ ಪ್ರಫುಲ್ಲಾ, ಪಿಡಿಒಗಳು ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.
--------