ಇಂಜಿನಿಯರಿಂಗ್‌ನಲ್ಲಿ ಕೈಗಾರಿಕೆಗೆ ಪೂರಕವಾಗಿ ಶಿಕ್ಷಣ ನೀಡಿ: ಸಿಎಂ ಸಿದ್ದರಾಮಯ್ಯ

Ambedkar college
Published on

ಬೆಂಗಳೂರು ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ.15 ಮಂದಿಗಷ್ಟೇ ಉದ್ಯೋಗ ದೊರೆಯುತ್ತಿದೆ. ಕೈಗಾರಿಕೆಗಳಿಗೆ ಪೂರಕವಾದ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಶಿಕ್ಷಣ ನೀಡಿದಾಗ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಒಳಾಂಗಣ ಕ್ರೀಡಾ ಸಂಕೀರ್ಣ ಹಾಗೂ ಮೊದಲನೇ ವರ್ಷದ ಬಿಇ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಜಿನಿಯರಿಂಗ್ ಶಿಕ್ಷಣ ಪಡದವರಲ್ಲಿ ಸರಾಸರಿ ಶೇ.15 ಮಂದಿಗಷ್ಟೇ ಉದ್ಯೋಗ ದೊರೆಯುತ್ತಿದೆ. ರಾಜ್ಯದಲ್ಲಿ ಈ ವರ್ಷ 1.31 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್‌ಗೆ ದಾಖಲಾಗಿದ್ದಾರೆ. ಕಾಲೇಜುಗಳು ಕೌಶಲ ಹೆಚ್ಚಿಸುವ ಕೋರ್ಸ್‌ಗಳನ್ನು ನಡೆಸಿದಾಗ ಹೆಚ್ಚೆಚ್ಚೆ ಉದ್ಯೋಗ ಸೃಷ್ಟಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಶಿಕ್ಷಣ ಪ್ರಬಲ ಅಸ:

ಅಸಮಾನತೆಯಿಂದ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರಲು ಶಿಕ್ಷಣವು ಪ್ರಬಲ ಮತ್ತು ಪರಿಣಾಮಕಾರಿ ಅಸವೆಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳುತ್ತಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬೇಕಿದೆ ಎಂದರು.

ಹಾಗೆಯೇ ವಿದ್ಯಾರ್ಥಿಗಳು ಸಂವಿಧಾನವನ್ನು ತಿಳಿದಾಗ ಮಾತ್ರ ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ವಿದ್ಯಾವಂತರಾದವರು ಮಾನವೀಯತೆ ಹಾಗೂ ಎಲ್ಲರನ್ನು ಪ್ರೀತಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು. ದ್ವೇಷದಿಂದ ಬದುಕಬಾರದು ಎಂದು ಕಿವಿಮಾತು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕೌಶಲ ಬಹಳ ಮುಖ್ಯ. ತಮ್ಮಲ್ಲಿನ ಕೌಶಲ ಹೆಚ್ಚಿಸಿಕೊಂಡಷ್ಟೂ ಹೆಚ್ಚೆಚ್ಚು ಅವಕಾಶಗಳು ದೊರೆಯಲಿವೆ. ಹಾಗೆಯೇ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಕ್ರೀಡಾ ಚಟುವಟಿಕೆಗಳು ಕೂಡ ಮುಖ್ಯ ಎಂದರು.

ಉತ್ತಮ ಗುಣಮಟ್ಟದ ಶಿಕ್ಷಣ ಜತೆಗೆ ಸಾಮಾಜಿಕ ಜವಾಬ್ದಾರಿಯಿಂದ ಶಿಕ್ಷಣ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿಯೂ ಮುಂದಿದ್ದು, ಸಮಾರಂಭದ ಉದ್ಘಾಟನೆಗಾಗಿ ದೀಪವನ್ನು ಬೆಳಗಿಸಲು ಕೂಡ ತಂತ್ರಜ್ಞಾನ ಅಳವಡಿಸಿಕೊಂಡಿರುವುದು ಖುಷಿಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಪಿವಿಪಿ ಕಲ್ಯಾಣ ದತ್ತಿ ಕಾರ್ಯದರ್ಶಿ ಎಸ್. ಶಿವಮಲ್ಲು, ಪ್ರಾಂಶುಪಾಲ ಡಾ. ಎಂ.ಎನ್. ತಿಪ್ಪೇಸ್ವಾಮಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಸಂಸ್ಥೆಯಲ್ಲಿನ ಶಿಕ್ಷಕರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ. - ಎಸ್. ಮರಿಸ್ವಾಮಿ, ಪಿವಿಪಿ ಕಲ್ಯಾಣ ದತ್ತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net