

ಸೊರಬ: ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಿಂದ ಉಂಟಾಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹೆಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಮೇ ತಿಂಗಳಿನಿಂದ ವಿಪರೀತ ಮಳೆಯಾದ ಪರಿಣಾಮ ಮೆಕ್ಕೆಜೋಳ, ಅಡಕೆ, ಶುಂಠಿ, ಕಬ್ಬು, ಭತ್ತ ಇನ್ನಿತರ ಬೆಳೆಗಳು ಬಹುತೇಕ ನಾಶವಾಗಿವೆ. ಇದರಿಂದ ರೈತರು, ಕೂಲಿಕಾರ್ಮಿಕರಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯೂ ಸಿಗುತ್ತಿಲ್ಲ. ಕೃಷಿಗಾಗಿ ಮಾಡಿದ ಸಾಲ ತೀರಿಸಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ವ್ಯವಸಾಯ ಸೇವಾ ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಸರ್ಕಾರದಿಂದ ಬೆಳೆ ಪರಿಹಾರ ಬಿಡುಗಡೆ ಮಾಡಿಸಬೇಕು. ಭತ್ತದ ಬೆಳೆಗೆ ಕನಿಷ್ಠ ನಾಲ್ಕು ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು. ಕೊಳವೆಬಾವಿಗಳಿಗೆ ಅಕ್ರಮ-ಸಕ್ರಮದಡಿ ಹಣಪಾವತಿ ಮಾಡಿದ ರೈತರಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬಗರ್‌ಹುಕುಂ ರೈತರಿಗೆ ಶೀಘ್ರವೇ ಹಕ್ಕುಪತ್ರ ನೀಡಬೇಕು. ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನ ದುರಸ್ತಿ ಮಾಡಬೇಕು ಎಂದು ಅಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹಾಲೇಶ್ ಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಬಾಪಟ್, ರೈತ ಸಂಘದ ಗೌರವಾಧ್ಯಕ್ಷ ಈರಪ್ಪ ಪ್ಯಾಟಿ, ಉಪಾಧ್ಯಕ್ಷ ಲೋಕಪ್ಪ, ವಿರೂಪಾಕ್ಷಪ್ಪ, ವಿಕ್ರಂ ಪಾಟೀಲ್, ಲೋಕಪ್ಪ, ಬಂಗಾರಪ್ಪ, ಶೇಖರಪ್ಪ, ಗದಿಗೆಪ್ಪ ಗೌಡ, ಕೆರಿಯಪ್ಪ, ಎಚ್.ಸಿ.ನಾಗರಾಜ ಇತರರಿದ್ದರು.