

ಶಿವಮೊಗ್ಗ: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ನೀಡಬೇಕು ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಕೆ.ಪಿ.ಶ್ರೀಪಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತರಾದ ಶಿವಮೊಗ್ಗದ ಮಂಜುನಾಥ ರಾವ್ ನಿವಾಸಕ್ಕೆ ಶ್ರೀಪಾಲ್ ನೇತೃತ್ವದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ಪ್ರಮುಖರು ಭೇಟಿ ನೀಡಿದ ಕುಟುಂಬಕ್ಕೆ ಸಾಂತ್ವನ ಹೇಳಿದರು. ದುಷ್ಕೃತ್ಯದಲ್ಲಿ ಭಾಗಿಯಾದವರನ್ನು ಕೇಂದ್ರ ಸರ್ಕಾರ ಆದಷ್ಟು ಶೀಘ್ರ ಪತ್ತೆ ಮಾಡಿ ಶಿಕ್ಷೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.
ಮೃತಪಟ್ಟ ಎಲ್ಲರಿಗೂ ನಮ್ಮ ಸಂಘಟನೆ ಸಂತಾಪ ಸೂಚಿಸುತ್ತದೆ ಹಾಗೂ ಈ ಘಟನೆಯನ್ನು ಖಂಡಿಸುತ್ತದೆ. ಮೃತರ ಕುಟುಂಬಗಳಿಗೆ ಪರಿಹಾರವಾಗಿ ಒಂದು ಕೋಟಿ ರೂ. ನೀಡುವುದರ ಜತೆಗೆ ಮೃತರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಮೃತಪಟ್ಟ ವ್ಯಕ್ತಿಯ ಕುಟುಂಬಗಳು ಇನ್ನೂ ಸಂಕಟದಿಂದ ಹೊರಬಂದಿಲ್ಲ. ಅನೇಕರಿಗೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ. ಕೆಲವು ರಾಜ್ಯಗಳು ತಮಗಿಷ್ಟ ಬಂದಷ್ಟು ಪರಿಹಾರ ಘೋಷಿಸಿವೆ. ಆದರೆ ಆ ಪರಿಹಾರ ಅತ್ಯಂತ ಕಡಿಮೆ. ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಮೃತಪಟ್ಟ ಕುಟುಂಬಗಳಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಪ್ರಮುಖರಾದ ವಿಜಯ್‌ಕುಮಾರ್, ಅನಿಸ್ ಪಾಶಾ, ಶೇರಾಜ್ ಸಿದ್ದಿಕ್ ಇತರರಿದ್ದರು.