ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಿ

protest
ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ಬಡ್ಸ್ ಆ್ಯಕ್ಟ್ ಮೂಲಕ ಹಣ ಪಡೆಯಲು ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಎಂ.ಬಿ.ರಾಜು, ಸುರೇಶ್, ಪೂರ್ಣೇಶ್, ಮಮತಾ ಮುಂತಾದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಠಗಿ ಪೀಡಿತ್ ಜಮಾಕರ್ತ ಪರಿವಾರ ಸಂಘಟನೆ ನೇತೃತ್ವದಲ್ಲಿ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಲ್ಲಿ ನೂರಾರು ಮಂದಿ ಹೂಡಿಕೆ ಮಾಡಿದ್ದರು. ಹಣಕಾಸು ಕಂಪನಿಗಳು ಕೋಟ್ಯಂತರ ರೂ. ಸಂಗ್ರಹ ಮಾಡಿಕೊಂಡು ಬಳಿಕ ಹೂಡಿಕೆದಾರರನ್ನು ವಂಚಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋಸಹೋದ ಸಾವಿರಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 (ಬಡ್ಸ್ ಆಕ್ಟ್ ) ಜಾರಿಗೊಳಿಸಿತ್ತು. ರಾಜ್ಯ ಸರ್ಕಾರ ಕೂಡ ಈ ಕಾಯ್ದೆ ಜಾರಿಗೆ ತಂದಿದೆ. ಇದರನ್ವಯ ವಂಚನೆಗೆ ಒಳಗಾದ ಸಂತ್ರಸ್ತರ ಹಣವನ್ನು ಮರುಪಾವತಿಸಲು ಮತ್ತು ವಂಚಕರನ್ನು ಶಿಕ್ಷಿಸಲು ಅನಕೂಲವಾಗುತ್ತದೆ ಎಂದರು.
ಠೇವಣಿದಾರರ ಹಣ ವಾಪಸ್ ಕೊಡದಿದ್ದರೆ ಅವರಿಗೆ ದಂಡ ಮತ್ತು ಜೈಲು ಶಿಕ್ಷೆ ಅಥವಾ ಅವರ ಕಂಪನಿ ವ್ಯವಹಾರ ಮತ್ತು ಆಸ್ತಿಯನ್ನು ಜಪ್ತಿ ಮಾಡಿ ಠೇವಣಿದಾರರಿಗೆ ಹಿಂದಿರುಗಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸಕ್ಷಮ ಪ್ರಾಧಿಕಾರ ರಚನೆ ಮಾಡಿ ವಿಶೇಷ ನ್ಯಾಯಾಲಯ ಒದಗಿಸಲು ಮತ್ತು ಪೊಲೀಸ್ ಅಧೀಕ್ಷಕರನ್ನು ನೇಮಿಸಲು ಅವಕಾಶವಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ಕುರಿತ ನಾಮಲಕಗಳು ಕಚೇರಿಯಲ್ಲೂ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರು ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ವಿಶೇಷ ಕೌಂಟರ್ ತೆರೆಯಬೇಕು. 180 ದಿನಗಳಲ್ಲಿ ಹಣ ಮರುಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಡ್ಸ್ ಆಕ್ಟ್ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಎಂ.ಬಿ.ರಾಜು, ಪೂರ್ಣೇಶ್, ಸುರೇಶ್, ಸೋಮಶೇಖರ್, ಮಮತಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net