ವಿಬಿಜಿ ರಾಮ್ ಜಿ ಸಿಬ್ಬಂದಿಗೆ ಸೇವಾ ಭದ್ರತೆ ಕಲ್ಪಿಸಿ

ರಾಜ್ಯದಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
VBGRAM
ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.folder
Published on: 

ಬೆಂಗಳೂರು: ರಾಜ್ಯದಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯಾಧ್ಯಕ್ಷ ಆರ್.ವಿನಯ್ ಕುಮಾರ್ ಮಾತನಾಡಿ, ಯೋಜನೆಯಡಿ ರಾಜ್ಯದಲ್ಲಿ 3,657 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಕುಂದುಕೊರತೆಗಳನ್ನು ಈಡೇರಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ, ಸಚಿವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ನರೇಗಾ ಹೆಸರು ಬದಲಾಗಿ ಈಗ ವಿಜಿಜಿ ರಾಮ ಜಿ ಎಂದು ಹೆಸರಿಸಲಾಗಿದೆ. ಕರ್ತವ್ಯದಲ್ಲೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಸಿಬ್ಬಂದಿಯನ್ನು ಮುಂದುವರೆಸು ಬಗ್ಗೆ ಸರ್ಕಾರದಿಂದ ಇದುವರೆಗೂ ಗ್ಯಾರೆಂಟಿ ನೀಡಿಲ್ಲ. ಇದರಿಂದಾಗಿ ಸಿಬ್ಬಂದಿ ಅತಂತ್ರದ ಸ್ಥಿತಿಯಲ್ಲಿ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯೋಜನೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ. ಸೇವೆಯನ್ನು ಪರಿಗಣಿಸಿ ಸೇವಾ ಭದ್ರತೆ ಒದಗಿಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿಯ ವಿದ್ಯಾರ್ಹತೆಗೆ ಅನುಗುಣವಾಗಿ ಮತ್ತು ಕಾರ್ಮಿಕ ಇಲಾಖೆಯ ಸುತ್ತೋಲೆಯಂತೆ ನೇಮಕ ಮಾಡಿಕೊಳ್ಳಬೇಕು. ಜಿಲ್ಲಾ ಪಂಚಾಯಿತಿ ಹಂತದಲ್ಲಿ ಡಿಎಂಐಎಸ್, ಡಿಐಇಸಿ, ಡಿಎಂ ಸಿಬ್ಬಂದಿಗೆ ನೀಡುತ್ತಿರುವ ವೇತನವನ್ನು ತಾಲೂಕು ಪಂಚಾಯಿತಿ ಹಂತದ ಸಿಬ್ಬಂದಿಗೂ ನೀಡಬೇಕು. ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನರೇಗಾ ಸಿಬ್ಬಂದಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈಗಿನ ಹಣ ದುಬ್ಬರಕ್ಕೆ ಅನುಗುಣವಾಗಿ ವೇತನ ಪರಿಷ್ಕರಿಸಬೇಕು. ಪ್ರಯಾಣ ಭತ್ಯೆ 2 ಸಾವಿರದಿಂದ 5 ಸಾವಿರಕ್ಕೆ ಏರಿಕೆ ಮಾಡಬೇಕು. ಬಾಕಿ ಇರುವ ಪ್ರಯಾಣ ಭತ್ಯೆಯನ್ನು ಬಿಡುಗಡೆ ಮಾಡಬೇಕು. ಎಲ್ಲಾ ಸಿಬ್ಬಂದಿಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಂಬಂಳದ ಪ್ಯಾಕೇಜ್ ಖಾತೆ ಮಾಡಿಸಿಕೊಡುವ ಬಗ್ಗೆ ಆಯುಕ್ತಾಲಯದಲ್ಲಿ ಇರುವ ಕಡತಕ್ಕೆ ಅನುಮೋದನೆ ನೀಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.

ಪಿಎಫ್ ಮತ್ತು ಇಎಸ್‌ಐ ವಿವರಗಳನ್ನು ನೀಡಿದ ನಂತರವಷ್ಟೇ ಗುತ್ತಿಗೆ ಸಂಸ್ಥೆಯಿಂದ ಸಿಬ್ಬಂದಿ ಖಾತೆಗೆ ವೇತನ ಪಾವತಿ ಮಾಡಬೇಕು. 10 ವರ್ಷ ಸೇವೆ ಸಲ್ಲಿಸಿ ಕೆಲಸ ಬಿಟ್ಟ ನಂತರ ಗ್ರಾಚ್ಯುಟಿ ನೀಡಬೇಕು. ಈ ಬಗ್ಗೆ ಗುತ್ತಿಗೆ ಸಂಸ್ಥೆಗೆ ಸರ್ಕಾರ ನಿರ್ದೇಶನ ನೀಡಬೇಕು. ಸಿಬ್ಬಂದಿಯ ಕುಂದು ಕೊರತೆ ಚರ್ಚಿಸಲು ಜಿಲ್ಲಾ ಮಟ್ಟದಲ್ಲಿ 3 ತಿಂಗಳಿಗೊಮ್ಮೆ, ರಾಜ್ಯ ಮಟ್ಟದಲ್ಲಿ 6 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘದ ಪದಾಧಿಕಾರಿಗಳಾದ ಸುರೇಶ್ ಬಾಳಿಕಾಯಿ, ಎಸ್.ಪಿ.ಸಂತೋಷ್, ಸಾಹಿಲ್ ದಾನಶೆಟ್ಟಿ, ಬಿ.ಎಸ್.ಅರುಣ್, ವೇಣುಕುಮಾರ್, ಅನುರಾಗ್ ಕುಮಾರ್, ಆನಂದ್, ಜಯ ಪ್ರಕಾಶ್, ಮಹಾದೇವ ಸ್ವಾಮಿ, ಮಧುಸುಧನ್, ಸಚಿನ್, ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net