ಪ್ರವಾಸಿತಾಣಗಳಿಗೆ ಮೂಲಸೌಕರ್ಯ ಒದಗಿಸಿ

24 HANUR 6
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ಗೆ ಶಾಸಕ ಎಂ.ಆರ್ ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಅಧಿಕಾರಿಗಳೊಂದಿಗೆ ತೆರಳಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ಸಂತೋಷ್‌ಕುಮಾರ್, ಮಹೇಶ್, ಗುರುಪ್ರಸಾದ್, ಧರ್ಮೇಂದ್ರ ಇತರರು ಇದ್ದರು.
Published on

ಹನೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ ಸೇರಿದಂತೆ ಕ್ಷೇತ್ರದಲ್ಲಿನ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವಂತೆ ಶಾಸಕ ಎಂ.ಆರ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಸೂಚನೆ ನೀಡಿದರು.

ತಾಲೂಕಿನ ಹೊಗೇನಕಲ್ ಫಾಲ್ಸ್‌ಗೆ ಶನಿವಾರ ಸಂಜೆ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ವಿವಿಧ ಅಧಿಕಾರಿ ವರ್ಗದವರೊಂದಿಗೆ ತೆರಳಿ ಮೂಲ ಸೌಕರ್ಯವನ್ನು ಪರಿಶೀಲಿಸಿ ಮಾತನಾಡಿದರು.

ಹೊಗೇನಕಲ್ ಫಾಲ್ಸ್ ಈ ಭಾಗದ ಪ್ರಸಿದ್ಧ ಪ್ರವಾಸಿ ತಾಣ. ಹಾಗಾಗಿ ಇಲ್ಲಿಗೆ ಕರ್ನಾಟಕ, ತಮಿಳುನಾಡು ಹಾಗೂ ಇನ್ನಿತರ ಕಡೆಗಳಿಂದ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಅಗತ್ಯ ಮೂಲ ಸೌಕರ್ಯವಿಲ್ಲ. ಇದರಿಂದ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಆಕ್ಷೇಪ ಕೇಳಿ ಬರುತ್ತಲೇ ಇದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಿದೆ. ಆದ್ದರಿಂದ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕು. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆತಂತಾಗುತ್ತದೆ. ಜನರ ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಹಾಗೆಯೇ ಕ್ಷೇತ್ರ ವ್ಯಾಪ್ತಿಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ತಮಿಳುನಾಡು ಭಾಗಕ್ಕೆ ಭೇಟಿ, ಪರಿಶೀಲನೆ: ಬಳಿಕ ಹೊಗೇನಕಲ್ ಫಾಲ್ಸ್‌ನ ನದಿಯ ದಡದ ತಮಿಳುನಾಡು ಭಾಗಕ್ಕೆ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ತೆರಳಿದ ಶಾಸಕರು ಅಲ್ಲಿ ಪ್ರವಾಸಿಗರಿಗೆ ಒದಗಿಸಿರುವ ಮೂಲ ಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದರು. ಜತೆಗೆ ಸ್ಥಳೀಯರಿಂದ ವ್ಯಾಪಾರ ವಹಿವಾಟಿನ ಬಗ್ಗೆಯೂ ಮಾಹಿತಿ ಪಡೆದರು. ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿದರು. ಈ ವೇಳೆ ತಮಿಳುನಾಡಿನ ಪ್ರವಾಸೋದ್ಯಮ ಅಧಿಕಾರಿ ಕದರೇಶ್ ಶಾಸಕರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ, ಡಿಸಿಎಫ್ ಡಾ. ಸಂತೋಷ್‌ಕುಮಾರ್, ಉಪ ವಿಭಾಗಾಧಿಕಾರಿ ಬಿ.ಆರ್ ಮಹೇಶ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಡಿವೈಎಸ್ಪಿ ಧರ್ಮೇಂದ್ರ, ಆರ್‌ಐ ಶಿವಕುಮಾರ್, ಪಿಡಿಒ ರಾಜಕುಮಾರ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net