ಶಿಳ್ಳೇಕ್ಯಾತ ಸಮುದಾಯದವರಿಗೆ ಸೌಲಭ್ಯ ಒದಗಿಸಿ: ಜಿ.ಪಲ್ಲವಿ ಸೂಚನೆ

pallavi
ಗೋಂದಿ ಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದವರಿಂದ ಜಿ.ಪಲ್ಲವಿ ಭೇಟಿಯಾಗಿ ಅಹವಾಲು ಆಲಿಸಿದರು. ಮಲ್ಲೇಶಪ್ಪ, ಸಂದೀಪ್, ಸುರೇಶ್, ರಾಜೀವ್, ಮಧು ಮುಂತಾದವರಿದ್ದರು.
Published on

ಶಿವಮೊಗ್ಗ: ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೇಕ್ಯಾತ ಸಮುದಾಯವು ಜೀವನೋಪಾಯಕ್ಕಾಗಿ ಎಲ್ಲೆಂದರಲ್ಲಿ ಚದುರಿ ಹೋಗಿದೆ. ಜೀವನ ನಿರ್ವಹಣೆಗಾಗಿ ಈ ಸಮುದಾಯ ಪರಿತಪಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ರಾಜ್ಯ ಪರಿಶಿಷ್ಟ ಜಾತಿ, ವರ್ಗ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಬೇಸರ ವ್ಯಕ್ತಪಡಿಸಿದರು.

ಗೋಂದಿ ಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ ನಿವಾಸಿಗಳ ಬೀದಿಗೆ ಸೋಮವಾರ ಭೇಟಿ ನೀಡಿ, ಅಲ್ಲಿನ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು. ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಯೋಜನೆಗಳಡಿ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಬೇಕು. ಸ್ವಾತಂತ್ರೃ ದೊರೆತ ಇಷ್ಟು ವರ್ಷಗಳ ಬಳಿಕವೂ ಇವರೆಲ್ಲ ಕನಿಷ್ಠ ಮಟ್ಟದಲ್ಲಿ ಜೀವನ ನಿರ್ವಹಿಸುತ್ತಿರುವುದು ನಾಗರಿಕ ಸಮಾಜಕ್ಕೆ ಅವಮಾನ. ಅತ್ಯಂತ ಹಿಂದುಳಿದಿರುವ, ಶಿಕ್ಷಣದಿಂದ ದೂರವೇ ಇರುವ, ಜೀವನೋಪಾಯಕ್ಕಾಗಿ ಮೀನುಗಾರಿಕೆ ಅವಲಂಬಿಸಿರುವ ಸಮುದಾಯಕ್ಕೆ ಶುದ್ಧ ಕುಡಿಯುವ ನೀರು, ವಸತಿ, ಶಾಲೆ, ವಿದ್ಯುತ್ ಸಂಪರ್ಕ ಮುಂತಾದ ಮೂಲ ಸೌಕರ್ಯ ಒದಗಿಸಬೇಕು ಎಂದರು.

ಶಿಳ್ಳೇಕ್ಯಾತ ಸಮುದಾಯದ ಅಧ್ಯಕ್ಷ ನಾಗಪ್ಪ ಮಾತನಾಡಿ, ನಮ್ಮ ಸಮುದಾಯ ಸಂಕಷ್ಟದಲ್ಲಿದೆ. ಅತ್ಯಂತ ಕನಿಷ್ಠ ಮಟ್ಟದ ಜೀವನ ನಿರ್ವಹಿಸುತ್ತಿರುವ ಸಮುದಾಯಕ್ಕೆ ಮೀನುಗಾರಿಕೆ ನಡೆಸಲು ಒಂದಷ್ಟು ಕೆರೆಗಳನ್ನು ಮೀಸಲಿಡಬೇಕು. ಮೀನುಗಾರರಿಗೆ ಅಗತ್ಯ ಸಲಕರಣೆಗಳ, ಮಾರುಕಟ್ಟೆ ಸೌಲಭ್ಯ, ಶೀತಲೀಕರಣ ಘಟಕಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

6-10ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಸಮುದಾಯದ ಮಕ್ಕಳಿಗೆ ಪ್ರವೇಶ ಪರೀಕ್ಷೆಗಳಿಲ್ಲದೆ ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ಹಾಗೂ ಉಚಿತ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ತರಬೇತಿಗೆ ಸರ್ಕಾರದಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ತಿಳಿಸಿದರು.

ಡಿವೈಎಸ್ಪಿ ಸಂಜೀವಕುಮಾರ್, ಪಿಡಿಒ ಮಧು, ಅಲೆಮಾರಿ ಅಭಿವೃದ್ಧಿ ನಿಗಮದ ಸದಸ್ಯ ಸಂದೀಪ್, ತಹಸೀಲ್ದಾರ್ ರಾಜೀವ್, ನಿಗಮದ ವ್ಯವಸ್ಥಾಪಕ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net