ಮಳಖೇಡ ಗ್ರಂಥಪಾಲಕಿ ಕುಟುಂಬಕ್ಕೆ ಪರಿಹಾರ ನೀಡಿ

Librarians' Employees Association
ಸೇಡಂ ತಾಲೂಕಿನ ಮಳಖೇಡ ಗ್ರಾಪಂ ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗ್ಯವಂತಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು ಜಿಪಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸತ್ಯನಾರಾಯಣ, ವೆಂಕಟೇಶ್, ಪಿ.ಡಿ.ಗಣೇಶಪ್ಪ, ಡಿ.ಎಚ್.ಹಾಲಪ್ಪ, ಎಂ.ಕೆ.ಜಯಪ್ಪ ಇತರರಿದ್ದರು.
Published on

ಶಿವಮೊಗ್ಗ: ಪಿಡಿಒ ಕಿರುಕುಳದಿಂದ ಗ್ರಂಥಾಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಪಂ ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗ್ಯವಂತಿ ಅಗ್ಗಿಮಠ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ಭಾಗ್ಯವಂತಿ ಅವರಿಗೆ 3 ತಿಂಗಳ ವೇತನ ನೀಡದೆ ಪಿಡಿಒ ಕಿರುಕುಳ ನೀಡಿದ್ದರಿಂದ ಮನನೊಂದು ಗ್ರಂಥಾಲಯದಲ್ಲೇ ಭಾಗ್ಯವಂತಿ ಅ.13ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ದರಿಂದ ಕುಟುಂಬದ ಅವಲಿಂಬಿತರಿಗೆ ಸರ್ಕಾರದಿಂದ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಗ್ರಂಥಾಲಯ ಮೇಲ್ವಿಚಾರಕರಿಗೆ ವೇತನವನ್ನು ಆರ್ಥಿಕ ಇಲಾಖೆಯಿಂದ 12 ಸಾವಿರ ರೂ. ಹಾಗೂ ಉಳಿದ ಹೆಚ್ಚುವರಿ ಕನಿಷ್ಠ ವೇತನವನ್ನು ಜಿಲ್ಲಾ ಪಂಚಾಯತ್‌ನಿಂದ ನೀಡಲಾಗುತ್ತಿದೆ. ಆದರೆ ಜಿಪಂನಿಂದ ಹೆಚ್ಚುವರಿ ಕನಿಷ್ಠ ವೇತನ 10 ತಿಂಗಳಿನಿಂದ ಬಾಕಿ ಇದ್ದು, ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು. ಗ್ರಂಥಪಾಲಕರಿಗೆ ಈ ರೀತಿಯ ದುರ್ಘಟನೆ ಮರುಕಳಿಸದಂತೆ ಎಲ್ಲ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಗ್ರಂಥಾಲಯ ಮೇಲ್ವಿಚಾರಕರ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ವೆಂಕಟೇಶ್ ಕಾರೇಹಳ್ಳಿ, ಕಾರ್ಯದರ್ಶಿ ಪಿ.ಡಿ.ಗಣೇಶಪ್ಪ, ಪದಾಧಿಕಾರಿಗಳಾದ ಡಿ.ಎಚ್.ಹಾಲಪ್ಪ, ಎಂ.ಕೆ.ಜಯಪ್ಪ, ಹರೀಶ್ ಹಿರೆಬಿಲಗುಂಜಿ, ಟಿ.ತ್ರಿವೇಣಿ, ಜೆ.ಚನ್ನಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net