

ಸಾಗರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಪೂರಕವಾಗಿದೆ. ಮಕ್ಕಳು ಓದಿನ ಜತೆಗೆ ಇಂತಹ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ರೋಟರಿ ಭವನದಲ್ಲಿ ಶಿಕ್ಷಣ ಇಲಾಖೆ ಮತ್ತು ರೋಟರಿ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಬೆಳಲಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಲಸ್ಟರ್ ಹಂತದ ಕಾರ್ಯಕ್ರಮಕ್ಕೆ ಸರ್ಕಾರದಿಂದ ಯಾವುದೇ ಸಹಕಾರ ಇರುವುದಿಲ್ಲ. ಸ್ಥಳೀಯ ಸಂಯೋಜಕ ಸಂಸ್ಥೆಗಳೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿವೆ. ಇಲ್ಲಿ ವಿಜೇತರಾದ ಮಕ್ಕಳು ರಾಜ್ಯ ಮಟ್ಟದವರೆಗೂ ಹೋಗಬೇಕು ಎಂದು ಆಶಿಸಿದರು.
ಮಕ್ಕಳಲ್ಲಿ ಓದುವ ಹಂಬಲ ಜಾಸ್ತಿ ಇದ್ದು, ಪಾಲಕರೂ ಸಹ ಇದಕ್ಕೆ ಒತ್ತು ನೀಡುತ್ತಿದ್ದಾರೆ. ಬರೀ ಓದುವಂತೆ ಒತ್ತಡ ಹಾಕಿ ಮಕ್ಕಳ ಖುಷಿ ಕಿತ್ತುಕೊಳ್ಳಬೇಡಿ. ಶಾಲೆ ಬಿಡುವ ಮಕ್ಕಳ ಮನೆಗೆ ಶಿಕ್ಷಣ ಇಲಾಖೆ ಸಿಬ್ಬಂದಿ ಹೋಗಿ ವಿಚಾರಿಸಬೇಕು. ನಿಮ್ಮಿಂದ ಸಾಧ್ಯವಾಗದೆ ಇದ್ದರೆ ನನಗೆ ತಿಳಿಸಿ ನಾನೇ ಮಕ್ಕಳ ಮನೆಗೆ ಬರುತ್ತೇನೆ. ಅವರಿಗೆ ಆರ್ಥಿಕ ಸಮಸ್ಯೆ ಇದ್ದರೆ ನಾನು ವೈಯಕ್ತಿಕ ಸಹಕಾರ ನೀಡುತ್ತೇನೆ ಎಂದರು.
ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಮಕ್ಕಳ ಬೆಳವಣಿಗೆಗೆ ಅಗತ್ಯ ವಾತಾವರಣ ಇದೆ. ಅವರಿಗೆ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಬೇಕು. ಶಿಕ್ಷಣ ಕ್ಷೇತ್ರಕ್ಕೆ ರೋಟರಿ ಸಂಸ್ಥೆ ನಿರಂತರ ಸಹಕಾರ ನೀಡುತ್ತ ಬಂದಿದೆ ಎಂದು ಹೇಳಿದರು.
ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಐಡಾ ಡಿಸೋಜ, ಶಿವಪ್ಪ, ಕಲಸೆ ಚಂದ್ರಪ್ಪ, ಮಂಡಗಳಲೆ ಗಣಪತಿ, ಬಿಇಒ ಸದಾನಂದ ಸ್ವಾಮಿ, ರಮೇಶ್, ವೆಂಕಟ ರಾವ್, ದೇವೇಂದ್ರಪ್ಪ, ಪಾಲಾಕ್ಷಪ್ಪ ನವೀನ್, ಈಶ್ವರಪ್ಪ. ಕವಿತಾ, ಮಹಾಲಕ್ಷ್ಮೀ ಇತರರಿದ್ದರು.