ಆ.15ಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

cams
ಕೋಲಾರದ ಪತ್ರಕರ್ತರ ಭವನದಲ್ಲಿ ಕ್ಯಾಮ್ಸ್ ಜಿಲ್ಲಾಧ್ಯಕ್ಷ ಸದಾನಂದ ಮಾತನಾಡಿದರು.
Published on

ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಆ.15ರಂದು ಆಯಾ ಶಿಕ್ಷಣ ಸಂಸ್ಥೆಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್ ಆಫ್ ಸ್ಕೂಲ್ (ಕ್ಯಾಮ್ಸ್) ಜಿಲ್ಲಾಧ್ಯಕ್ಷ ಸದಾನಂದ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತುಳಿಯುವ ಕೆಲಸ ಮಾಡುತ್ತಿವೆ. ವರ್ಷಕ್ಕೊಮ್ಮೆ ನಿಯಮಗಳನ್ನು ಕಠಿಣಗೊಳಿಸುತ್ತಿರುವುದರಿಂದ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯಿಂದ ಸಹಕಾರ ದೊರೆಯುತ್ತಿಲ್ಲ, ಹಿಂಸೆ ನೀಡುವ ಪೂರಕ ಆದೇಶ ಹೊರಡಿಸುತ್ತಿದೆ. ಐದು ವರ್ಷಕೊಮ್ಮೆ ನವೀಕರಣ ನಡೆಯುತ್ತಿರುವುದನ್ನು 10 ವರ್ಷಕ್ಕೊಮ್ಮೆ ಮಾಡಬೇಕು ಎಂಬ ಬೇಡಿಕೆ ಸರ್ಕಾರದ ಮುಂದಿಡಲಾಗಿತ್ತು. ಅದನ್ನ ಈಗ ವರ್ಷಕ್ಕೊಮ್ಮೆ ಮಾಡಿದ್ದು, ಇಲಾಖಾಧಿಕಾರಿಗಳು ಹಣ ಮಾಡುವ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಶುಲ್ಕ ವಿಚಾರದಲ್ಲೂ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಗೆ ಅನುಗುಣವಾಗಿ ಮಾಡಿಕೊಂಡಿದೆ. ನಾವೇನು ಪೋಷಕರಿಂದ ಒಂದೇ ಬಾರಿ ಶುಲ್ಕ ವಸೂಲಿ ಮಾಡುತ್ತಿಲ್ಲ, ಕಂತು ಲೆಕ್ಕಾಚಾರದಲ್ಲಿ ಪಾವತಿಸಿಕೊಳ್ಳಲಾಗುತ್ತಿದೆ. ಅಗ್ನಿ ಸುರಕ್ಷಾ ಕ್ರಮಗಳನ್ನು ಅಳವಡಿಸುವಲ್ಲಿ ಇಲಾಖೆಯ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಇದರ ಜತೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯಿಂದಲೂ ಕಿರುಕುಳ ಶುರುವಾಗಿದೆ ಎಂದು ದೂರಿದರು.
ಪದಾಧಿಕಾರಿಗಳಾದ ಮುನೇಗೌಡ, ನರೇಶ್ ಬಾಬು, ನಾಗಭೂಷಣ್, ಮುನಿಯಪ್ಪ, ಅಶೋಕ್‌ಕುಮಾರ್ ಇದ್ದರು.

ಬಾಕ್ಸ್…
ವಿಫಲವಾದ ಎಂಎಲ್‌ಸಿಗಳು
2017ಕ್ಕೂ ಮುಂಚೆ ಪ್ರಾರಂಭವಾದ ಶಾಲೆಗಳಿಗೆ ಹೊಸ ನಿಯಮ ಬೇಡ, ಹೊಸದಾಗಿ ಪ್ರಾರಂಭಿಸುವ ಶಾಲೆಗಳಿಗೆ ನಿಯಮಗಳನ್ನು ವಿಽಸಲಿ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ಇನ್ನು ನಮ್ಮಿಂದ ಆಯ್ಕೆಯಾಗಿ ವಿಧಾನ ಪರಿಷತ್‌ಗೆ ಹೋಗಿರುವ ಸದಸ್ಯರು ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದೇ ಅನಿವಾರ್ಯವಾಗಿದ್ದು, ಅಂದಿನ ದಿನ ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸದಾನಂದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net