ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಪ್ರತಿಭಟನೆ

kannada
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿಗೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಳಗದ ಎಚ್.ಎಸ್.ಕಿರಣ್‌ಕುಮಾರ್, ಸಂತೋಷ್, ಆರತಿ ತಿವಾರಿ, ಮಂಜುನಾಥ್, ಮಾಲತೇಶ್ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ವಾಣಿಜ್ಯ ಮಳಿಗೆಗಳು, ಶಾಲೆಗಳು, ಶಾಲಾ ವಾಹನಗಳಲ್ಲಿನ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಬಳಗದ ಪದಾಧಿಕಾರಿಗಳು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡದ ಬಗ್ಗೆ ಇನ್ನಿಲ್ಲದ ಪ್ರೀತಿ ತೋರುವ ರಾಜಕಾರಣಿಗಳು, ಅಧಿಕಾರಿಗಳು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ನೆಪಮಾತ್ರಕ್ಕೆ ಸುತ್ತೋಲೆ ಹೊರಡಿಸಲಾಗುತ್ತಿದೆ. ಇವರೆಲ್ಲ ನಿತ್ಯದ ವ್ಯವಹಾರಗಳಲ್ಲಿ, ತಮ್ಮ ಮಾಲೀಕತ್ವದ ಸಂಸ್ಥೆಗಳಲ್ಲಿ ಕನ್ನಡ ಬಳಸುತ್ತಿಲ್ಲ. ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಕನ್ನಡ ಪರ ಸರ್ಕಾರದಿಂದ ಹೊರಬಿದ್ದ ಆದೇಶಗಳು ಕಾಗದದಲ್ಲೇ ಉಳಿದುಹೋಗಿವೆ. ಅಂಗಡಿಗಳ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂಬ ಆದೇಶವಿದ್ದರೂ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕನ್ನಡ ಹೊರತುಪಡಿಸಿ ಅನ್ಯಭಾಷೆ ಬಳಕೆಯ ಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಪ್ರಮುಖರಾದ ಆರತಿ ತಿವಾರಿ, ಸಂತೋಷ್, ಮಾಲತಿ, ಗಣೇಶ್, ಜ್ಯೋತಿ, ಪದ್ಮಿನಿ ಮಾಲತೇಶ್, ಮಂಜುನಾಥ್, ಕೇಶವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net