

ಶಿವಮೊಗ್ಗ: ಸೂಕ್ತ ದಾಖಲಾತಿಗಳನ್ನು ಹೊಂದಿರುವ, ಶರಾವತಿ ಯೋಜನೆಯಿಂದ ಮುಳುಗಡೆಯಾದ ನೈಜ ಸಂತ್ರಸ್ತರನ್ನು ಸರ್ವೇ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಶರಾವತಿ ಸಂತ್ರಸ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿ, ಆರು ದಶಕಗಳ ಹಿಂದೆ ನಾಡಿಗೆ ಬೆಳಕು ನೀಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿ ಇಂದಿಗೂ ಭೂಮಿ ಹಕ್ಕು ಸಿಗದೇ ಸಂತ್ರಸ್ತರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಮುಳುಗಡೆ ರೈತರ ಸಂಕಷ್ಟ ಆಲಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಣ್ಣು, ಕಿವಿ ಎರಡೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ನೋವು ಆಲಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರಿಗೆ ಸಮಯವೇ ಇಲ್ಲ. ಪಕ್ಷಾತೀತವಾದ ಹೋರಾಟವಿದು. ಜಿಲ್ಲಾಡಳಿತ ನಮ್ಮ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸುವ ತನಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಹಿರಿಯ ಐಎಎಸ್ ಅಧಿಕಾರಿ 2015-18ರ ಅವಧಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿ, ಶರಾವತಿ ಮುಳುಗಡೆ ರೈತರಿಗೆ ಭೂಮಿ ಹಕ್ಕುಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಮೂರು ತಲೆಮಾರು ಕಳೆದರೂ ಭೂ ಹಕ್ಕು ನೀಡದೆ ಇರುವುದರಲ್ಲಿ ಸರ್ಕಾರದ ತಪ್ಪಿದೆ. ಈ ಅನ್ಯಾಯ ಸರಿಪಡಿಸಬೇಕು ಎಂದಿದ್ದರು. ಆದರೆ ಈ ಸೂಚನೆಯನ್ನು ಪಾಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ರೈತ ಪರ ಹೋರಾಟಗಾರರಾದ ಶಿವಾನಂದ ಕುಗ್ವೆ, ಕೆರೆಹಳ್ಳಿ ರಾಮಪ್ಪ, ಕೆ.ಸಿ.ನಾಗರಾಜ್, ಷಣ್ಮುಖ, ಸುಧಾಕರ್ ಶೆಟ್ಟಿಹಳ್ಳಿ, ಪ್ರವೀಣ್ ಹಿರೇಇಡಗೋಡು, ಪ್ರದೀಪ್ ಹೆಬ್ಬೂರು, ಸುಧೀರ್ ಮತ್ತಿತರರಿದ್ದರು.