

ಶಿವಮೊಗ್ಗ: ಸರಕು ವಾಹನಗಳಿಗೆ ಆಜೀವ ತೆರಿಗೆ ಪಾವತಿಸುವ ಬದಲು ಈ ಹಿಂದಿನಂತೆ ತ್ರೈಮಾಸಿಕ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಮಿನಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಗುರುವಾರ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಹಿಂದೆ ಸರಕು ವಾಹನಗಳಿಗೆ ತ್ರೈಮಾಸಿಕ ತೆರಿಗೆಯನ್ನು (ಮೂರು ತಿಂಗಳಿಗೊಮ್ಮೆ) ಎರಡು ಸಾವಿರ ರೂ. ತೆರಿಗೆ ಪಾವತಿಸಲಾಗುತ್ತಿತ್ತು. ಆದರೆ ಹಾಲಿ ತ್ರೈಮಾಸಿಕ ತೆರಿಗೆ ಪಾವತಿಸುವ ಬದಲು ಆಜೀವ ತೆರಿಗೆ ಪಾವತಿಸಲು ಸರ್ಕಾರ ಆದೇಶಿಸಿದೆ. ಇದರಿಂದ ಪ್ರತಿ ಲಾರಿ ಮಾಲೀಕರು 2 ವರ್ಷದ ಹಳೆಯ ಲಾರಿಗೆ 95 ಸಾವಿರ ರೂ. ಮತ್ತು 15 ವರ್ಷದ ಹಳೆಯ ವಾಹನಗಳಿಗೆ 45 ಸಾವಿರ ರೂ. ಪಾವತಿಸಬೇಕಾಗಿದೆ ಎಂದು ದೂರಿದರು.
ಈ ಬಗ್ಗೆ ಲಾರಿ ಮಾಲೀಕರಿಗೆ ಯಾವುದೇ ಮುನ್ಸೂಚನೆ ಮತ್ತು ಮಾಹಿತಿ ನೀಡದೆ ಆದೇಶಿಸಿದ್ದು, ಇದರಿಂದ ಆರ್‌ಟಿಒ ಕಚೇರಿಯಲ್ಲಿ ತ್ರೈಮಾಸಿಕ ತೆರಿಗೆ ಪಾವತಿಸಲು ನಿರಾಕರಿಸಲಾಗುತ್ತಿದೆ. ಹೀಗಾಗಿ ಲಾರಿ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಆಜೀವ ತೆರಿಗೆ ಪಾವತಿಸಲು ಮಿನಿ ಲಾರಿ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರಕು ವಾಹನಗಳಿಗೆ ಈ ಹಿಂದಿನಂತೆ ತೆರಿಗೆ ಪಾವತಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕಾರ್ಯದರ್ಶಿ ಕೆ.ಎನ್.ಬೋಸ್‌ರಾಜ್, ಆಸ್ೀ, ಮುನ್ನಾ, ಬಾಲು, ಅಬ್ದುಲ್ ಖಲೀಂ, ಶ್ರೀನಿವಾಸ್ ಮತ್ತಿತರರಿದ್ದರು.