

ಬಾಗಲಕೋಟೆ: ಹೊರರಾಜ್ಯದಿಂದ ಬಂದ ಬೇರೆ ಊರಿನ ಜನರಿಗೆ ಕಜ್ಜಿಡೋಣಿ ಗ್ರಾಮದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲು ಮುಂದಾಗಿದ್ದ ಜಿಲ್ಲಾಡಳಿತ, ಗ್ರಾಮಸ್ಥರ ವಿರೋಧಕ್ಕೆ ಮಣಿದು ಅವರನ್ನು ವಾಪಸ್ ಬೇರೆಡೆಗೆ ಕರೆದೊಯ್ದಿದೆ.
ಬೇರೆ ಊರಿನ ಜನರಿಗೆ ನಮ್ಮೂರಿನಲ್ಲಿ ಕ್ವಾರಂಟೈನ್ ಮಾಡೋದು ಬೇಡ. ಅವರನ್ನು ಯಾವುದೇ ಕಾರಣಕ್ಕೂ ಗ್ರಾಮದೊಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಹೊರರಾಜ್ಯದಿಂದ ನಮ್ಮೂರಿನವರು ಬಂದಿದ್ದರೆ ಅವರನ್ನಷ್ಟೇ ಇಲ್ಲಿ ಕ್ವಾರಂಟೈನ್ ಮಾಡಿ ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಬೆಳಗ್ಗೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರದಿಂದ ಬಂದಿದ್ದ ಬೇರೆ ಊರಿನ ಜನರನ್ನು ಕಜ್ಜಿಡೋಣಿ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಇದಕ್ಕೆ ಸ್ಥಳೀಯವಾಗಿ ಭಾರೀ ವಿರೋಧ ವ್ಯಕ್ತವಾಯಿತು. ಅದರಂತೆ ಬೆಳಗ್ಗೆ 9ಕ್ಕೆ ಗ್ರಾಮಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆಗೆ ಕುಳಿತರು. ರಸ್ತೆ ಬಂದ್ ಆಗಿದ್ದರಿಂದ ವಾಹನಗಳು ಕಿಲೋ ಮೀಟರ್ಗಟ್ಟಲೇ ಸಾಲುಗಟ್ಟಿ ನಿಂತಿದ್ದವು.
ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಪೊಲೀಸರು ಖಜ್ಜಿಡೋಣಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರಾದರೂ ಫಲಿಸಲಿಲ್ಲ. ನಮ್ಮೂರಲ್ಲಿ ಕರೊನಾ ಸೋಂಕು ಕಾಣಿಸಿಲ್ಲ. ಈಗ ಎಲ್ಲಿಂದಲೋ ಬಂದವರನ್ನು ನಮ್ಮೂರಲ್ಲಿ ಕರೆತರುವುದು ಬೇಡ ಎಂದು ಗ್ರಾಮಸ್ಥರು ಅಧಿಕಾರಿಗಳು ಮತ್ತು ಪೊಲೀಸರ ಜತೆಗೆ ವಾಗ್ವಾದ ನಡೆಸಿದರು. ಜನರನ್ನು ಚದುರಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಂತಿಮವಾಗಿ ಗ್ರಾಮಸ್ಥರ ವಿರೋಧಕ್ಕೆ ಮಣಿದ ಜಿಲ್ಲಾಡಳಿತ, ಕಜ್ಜಿಡೋಣಿ ಗ್ರಾಮದಲ್ಲಿ ಕ್ವಾರಂಟೈನ್ಗೆ ಒಳಪಡಬೇಕಿದ್ದ ಬೇರೆ ಊರಿನ ಜನರನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ಯಿತು. ಇನ್ನು ಇದೇ ಗ್ರಾಮಕ್ಕೆ ಸೇರಿದವರನ್ನು ಮಾತ್ರ ಇಲ್ಲಿನ ಕ್ವಾರಂಟೈನ್ನಲ್ಲೇ ಬಿಡಲಾಯಿತು.