

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅಕ್ರಮದ ವಿಚಾರ ಇಟ್ಟುಕೊಂಡು ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಎದಿರೇಟು ನೀಡಲು ವಿವಿಧ ರೀತಿಯ ಚಿಂತನೆ ಮೊಳಕೆಯೊಡೆದಿದೆ.
ಜಿಲ್ಲಾವಾರು ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಈ ಎರಡೂ ಪ್ರಕರಣದ ದಾಖಲೆ ಬಿಡುಗಡೆ ಮಾಡಬೇಕೆಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆದಿದೆ. ಇದೇ ವೇಳೆ ಸಿದ್ದರಾಮಯ್ಯ ತೇಜೋವಧೆ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನಡೆಸುವ ಬಗ್ಗೆಯೂ ಕೆಲವು ಸಚಿವರು ಒಲವು ತೋರಿದ್ದಾರೆ.
ಸಹಕಾರ ಸಚಿವ ರಾಜಣ್ಣ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅಹಿಂದ ನಾಯಕ. ಅವರ ಇಮೇಜ್ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ಸಿದ್ದರಾಮಯ್ಯ ಪರ ಪ್ರತಿಭಟನೆ, ಮೆರವಣಿಗೆ ಮಾಡುವೆ. ನಮ್ಮ ಜಿಲ್ಲೆಯಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ವಾಲ್ಮೀಕಿ ಹಗರಣ ಆಗಿಲ್ಲ ಎಂದು ನಾವು ಹೇಳಿಲ್ಲ. ಮೂರು ಸಂಸ್ಥೆಗಳಿಂದ ತನಿಖೆ ನಡೆಯುತ್ತಿರುವುದು ಇದೇ ಮೊದಲು. ಮುಡಾ ಹಗರಣ ಕುರಿತು ತನಿಖೆ ಆಗಲಿ, ಸತ್ಯ ಹೊರಗೆ ಬರಲಿ. ಆದರೆ, ಪ್ರತಿಪಕ್ಷದವರಿಗೆ ತಾಳ್ಮೆ ಇಲ್ಲವಾಗಿದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್‌ನವರು ಸುಳ್ಳು ಹೇಳಿಕೊಂಡು ಹೊರಟಿದ್ದಾರೆ. ಅವರು ಹೊಸದಾಗಿ ಮದುವೆ ಮಾಡಿಕೊಂಡಂತೆ ಆಡುತ್ತಿದ್ದಾರೆ. ಸ್ವಲ್ಪ ದಿನ ಕಳೆದ ಮೇಲೆ ಸತ್ಯ ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.