ರಾಜ್ಯ ರೈತ ಸಂಘ ಏಕೀಕರಣ ಸಮಿತಿಯಿಂದ ಮದ್ದೂರಿನಲ್ಲಿ ಪ್ರತಿಭಟನೆ

oppo_2
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಸಮಿತಿ ಮದ್ದೂರು ತಾಲೂಕು ಘಟಕದ ವತಿಯಿಂದ ಮದ್ದೂರು ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಎಚ್.ಜಿ.ಪ್ರಭುಲಿಂಗು, ಕೀಳಘಟ್ಟ ನಂಜುಂಡಯ್ಯ, ಸೊ.ಸಿ.ಪ್ರಕಾಶ್, ಕೆ.ಜಿ.ಉಮೇಶ್, ಅಣ್ಣೂರು ಮಹೇಂದ್ರ, ಸೀತಾರಾಮು ಇದ್ದರು.
Published on

ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಸಮಿತಿ ಮದ್ದೂರು ತಾಲೂಕು ಘಟಕದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಚೇರಿ ಆವಣದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರೈತರ ಬಗೆಗಿನ ಕಾಳಜಿ ಇಲ್ಲವಾಗಿದೆ. ದುಬಾರಿ ರಸಗೊಬ್ಬರ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಬೆಳೆಗೆ ಬೆಲೆ ದೊರೆಯದಿರುವುದು. ಇನ್ನೊಂದೆಡೆ ಬ್ಯಾಂಕ್, ಸಹಕಾರ ಸಂಘಗಳು ಹಾಗೂ ಖಾಸಗಿ ಸಾಲಗಳಿಂದ ಮುಕ್ತನಾಗದಿರುವುದರಿಂದ ರೈತರು ಕೃಷಿಯಿಂದ ವಿಮುಖರಾಗುವ ಸಾಧ್ಯತೆಗಳು ಇರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಪರವಾಗಿ ಚಿಂತಿಸಿ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಕೊಡುತ್ತಿರುವ ಎಫ್‌ಆರ್‌ಪಿ ದರ ಪರಿಷ್ಕರಣೆ ಜತೆಗೆ ಏಕರೂಪ ಬೆಲೆ ನಿಗದಿಯಾಗಬೇಕು. ರಾಜ್ಯ ಸರ್ಕಾರ ಒಂದು ಟನ್ ಕಬ್ಬಿಗೆ 5 ಸಾವಿರ ರೂ. ಕೊಡಬೇಕು ಹಾಗೂ ಕೂಡಲೇ ಕಾರ್ಖಾನೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.

ಭತ್ತ ಖರೀದಿ ಕೇಂದ್ರಗಳು ವರ್ಷಪೂರ್ತಿ ಕಾರ್ಯನಿರ್ವಹಿಸಬೇಕು ಮತ್ತು ರೈತರಿಗೆ ಒಂದು ವಾರದೊಳಗೆ ಹಣಪಾವತಿ ಆಗಬೇಕು. ಭತ್ತಕ್ಕೆ ರಾಜ್ಯ ಸರ್ಕಾರ 500 ರೂ. ಪ್ರೋತ್ಸಾಹಧನ ಕೊಡಬೇಕು ಎಂದರು.

ಮುಂಗಾರು ಆರಂಭವಾಗುತ್ತಿರುವುದರಿಂದ ಕೃಷಿಕರಿಗೆ ಉಚಿತ ಉತ್ತಮ ಬಿತ್ತನೆ ಬೀಜ ಕೊಡಬೇಕು. ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಸ್ಮಿತಾ ರಾಮು ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಮದ್ದೂರು ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು, ಮಳವಳ್ಳಿ ತಾಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಸೊ.ಸಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಮುಖಂಡರಾದ ಅಂದಾನಿಗೌಡ, ಕೆ.ಜಿ.ಉಮೇಶ್, ಹುರಗಲವಾಡಿ ಉಮೇಶ್, ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ಪುಟ್ಟಸ್ವಾಮಿ, ಮಲ್ಲೇಶ್, ಸೀತಾರಾಮ, ಶ್ರೀನಿವಾಸ್, ಶಿವಲಿಂಗಯ್ಯ, ವೆಂಕಟೇಶ್, ಚೆನ್ನಪ್ಪ, ಜಯರಾಮ, ಶಿವಲಿಂಗಯ್ಯ, ಬಿಳಿಗೌಡ, ರಾಮಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net