

ಶಿವಮೊಗ್ಗ: ತಾಲೂಕಿನ ವಿವಿಧೆಡೆ ಬಗರ್‌ಹುಕುಂ ಜಮೀನನ್ನು ಸಕ್ರಮ ಕೋರಿ ಫಾರಂ 53 ಹಾಗೂ 57ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಗರ್‌ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿ ಹಲವು ವರ್ಷಗಳಾದರೂ ಸಾಗುವಳಿ ಚೀಟಿ ನೀಡಿಲ್ಲ. ಇದರಿಂದ ಸಾಗುವಳಿದಾರರಿಗೆ ತೊಂದರೆಯಾಗಿದೆ. ಕೂಡಲೇ ಬಗರ್‌ಹುಕುಂ ಕಮಿಟಿ ರಚನೆ ಮಾಡಿ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶಿವಮೊಗ್ಗ ತಾಲೂಕಿನ ಗ್ರಾಪಂಗಳ ವ್ಯಾಪ್ತಿಯಲ್ಲಿ 94ಡಿ ಅಡಿಯಲ್ಲಿ ಸರ್ವೇ ಮುಗಿದಿದೆ. ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಹಸೂಡಿ ಗ್ರಾಮದ ಸವೇ ನಂ.139ರಲ್ಲಿ 92.20 ಎಕರೆ ಸರ್ಕಾರಿ ಕೆರೆ ಜಮೀನನ್ನು ಒತ್ತುವರಿ ಮಾಡಿರುವ ಬಗ್ಗೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಒತ್ತುವರಿದಾರರು ಜಮೀನು ಬಿಟ್ಟು ಕೊಡಲು ಒಪ್ಪಿದ್ದು ಸರ್ವೇ ಮಾಡಿ ಕೆರೆ ಸುತ್ತ ಗಡಿ ಗುರುತು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್, ಪ್ರಮುಖರಾದ ಕೆ. ಸುಂದರ್, ಆರ್ಮುಗಂ, ಕುಬೇಂದ್ರಪ್ಪ ಆನವೇರಿ, ಮೊಹಮ್ಮದ್ ಹುಸೇನ್, ಎಸ್. ಗೀತಾ, ವಿಜಯಾ, ಧನಭಾಗ್ಯ, ಜಯಕುಮಾರಿ, ಸುರೇಶ್, ಮಂಜುಳಾ ಮುಂತಾದವರಿದ್ದರು.