ಟೋಲ್‌ ತೆರವಿಗೆ ಒತ್ತಾಯಿಸಿ 29ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ

tolgate horata samiti G.P. Shivaraj
ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ, ವಕೀಲ ಜಿ.ಪಿ.ಶಿವರಾಜ್
Published on

ಶಿವಮೊಗ್ಗ: ಶಿವಮೊಗ್ಗ-ಹಾನಗಲ್ ರಾಜ್ಯ ಹೆದ್ದಾರಿಯ ಸವಳಂಗ ಸಮೀಪದ ಕಲ್ಲಾಪುರ ಮತ್ತು ಶಿರಾಳಕೊಪ್ಪ ಬಳಿ ಕುಟ್ರಳ್ಳಿಯಲ್ಲಿ ಅವೈಜ್ಞಾನಿಕವಾಗಿರುವ ಟೋಲ್‌ಗೇಟ್‌ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಆ. 29ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ, ವಕೀಲ ಜಿ.ಪಿ.ಶಿವರಾಜ್ ಹೇಳಿದರು.

ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ರಾಜ್ಯ ಹೆದ್ದಾರಿ-57 ಹಾದುಹೋಗಿದೆ. 2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಟೋಲ್ ನಿರ್ಮಾಣ ಮಾಡಲು ಹಲವು ನಿಬಂಧನೆಗಳನ್ನು ವಿಧಿಸಿದೆ. ಆದರೆ ರಾಜ್ಯ ಸರ್ಕಾರ ಕಾಯ್ದೆ ನಿಯಮಗಳನ್ನು ಗಾಳಿಗೆ ತೂರಿ ಎರಡು ಕಡೆ ಟೋಲ್ ನಿರ್ಮಿಸಿದೆ. ಅದರ ವಿರುದ್ಧ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೋಲ್ ಅಳವಡಿಸುವಾಗ ಕನಿಷ್ಠ 60 ಕಿ.ಮೀ. ಅಂತರ ಇರಬೇಕೆಂಬ ನಿಯಮವಿದೆ. ಆದರೆ ಕಲ್ಲಾಪುರ ಮತ್ತು ಕುಟ್ರಳ್ಳಿ ನಡುವೆ 30 ಕಿ.ಮೀ. ಅಂತರದಲ್ಲಿ ಟೋಲ್‌ಗೇಟ್ ನಿರ್ಮಿಸಲಾಗಿದೆ. 20 ಕಿ.ಮೀ. ಒಳಗಿರುವವರೆಗೆ ತಿಂಗಳಿಗೆ 150 ರೂ.ನಂತೆ ಪಾಸ್ ಕೊಡಲು ಅವಕಾಶವಿದೆ. ಆದರೆ ಈ ನಿಯಮ ಪಾಲಿಸುತ್ತಿಲ್ಲ. ಆದ್ದರಿಂದ ಪಕ್ಷಾತೀತವಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಬಡವರು, ಸ್ಥಳೀಯ ನಿವಾಸಿಗಳು, ರೈತರು, ಆಸ್ಪತ್ರೆಗೆ ಓಡಾಡುವರು, ಕಚೇರಿಗೆ ಹೋಗುವವರಿಗೆ ಟೋಲ್‌ಗೇಟ್ ಆರ್ಥಿಕ ಹೊರೆಯಾಗುತ್ತಿದೆ. ಸ್ಥಳೀಯರು ತಾಲೂಕು ಕೇಂದ್ರಕ್ಕೆ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಆದ್ದರಿಂದ ಟೋಲ್‌ಗೇಟ್ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಸಮಿತಿ ಪದಾಧಿಕಾರಿಗಳಾದ ವಿನಯ್ ಪಾಟೀಲ್, ಅಬ್ದುಲ್ ನವೀದ್, ಪುಟ್ಟಣ್ಣ ಗೌಡ, ಶಿವರಾಜ್, ಶೇಖರಪ್ಪ ನಿಂಬೆಗೊಂದಿ, ಮನ್ಸೂರ್ ಖಾನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net