

ಶಿವಮೊಗ್ಗ: ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ, ಹಿಂದುಳಿತ ಜನಜಾಗೃತಿ ವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾಗೃತಿ ವೇದಿಕೆಯಿಂದ ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಮತ್ತು ಹಕ್ಕೊತ್ತಾಯ ಮಂಡನೆಯನ್ನು ನ.20ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಡಲಾಗುವುದು ಎಂದು ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದರು.
ರಾಜ್ಯ ಸರ್ಕಾರ 2014-15ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ 180 ಕೋಟಿ ರೂ. ವೆಚ್ಚ ಮಾಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಎಲ್ಲ ಜಾತಿಗಳ ಹಿಂದುಳಿದವರ ಸಮಗ್ರ ವರದಿ ಸಿದ್ಧಪಡಿಸಿದ್ದು ತಕ್ಷಣವೇ ಬಿಡುಗಡೆಗೆ ಒತ್ತಾಯಿಸಿ ಧರಣಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಾಶ್ವತ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಅದನ್ನು ನಮ್ಮ ಮೂರು ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮದು ನ್ಯಾಯಬದ್ಧ ಹೋರಾಟವಾಗಿದೆ. ಬಿಹಾರ ಸರ್ಕಾರ ಈಗಾಗಲೇ ವರದಿ ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಅವರು ಬಿಡುಗಡೆ ಮಾಡುವುದಾಗಿ ಪದೇ ಪದೆ ಹೇಳುತ್ತಲೇ ಬಂದಿದ್ದಾರೆ. ಆದರೂ ಬಿಡುಗಡೆ ಮಾಡುತ್ತಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಅವರು ಕೂಡಲೇ ವರದಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಮುಖ್ಯಸ್ಥ ವಿ.ರಾಜು ಮಾತನಾಡಿ, ಕಾಂತರಾಜ ವರದಿ ಜಾರಿಗೆ ಮೇಲ್ವರ್ಗದವರು ಅಡ್ಡಿಪಡಿಸುತ್ತಿದ್ದಾರೆ. ಮೇಲ್ವರ್ಗದವರು ಹಿಂದುಳಿದ ವರ್ಗಗಳ ಏಳಿಗೆ ಸಹಿಸುವುದು ಕಷ್ಟ. ಕಾಂತರಾಜ ವರದಿ ವಿರೋಧಿಸುವವರು ಸಂವಿಧಾನವನ್ನೇ ವಿರೋಧಿಸಿದಂತಾಗುತ್ತದೆ. ಬಹಿರಂಗವಾದರೆ ಎಲ್ಲಿ ನಮ್ಮ ಸ್ಥಾನಮಾನ ಗೊತ್ತಾಗುತ್ತದೆಯೋ ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಆದರೆ ಇದು ತಪ್ಪು. ಎಲ್ಲ ಮೇಲ್ವರ್ಗದವರು ಕಾಂತರಾಜ ವರದಿ ಅಧ್ಯಯನ ಮಾಡಿದರೆ ಈ ಸಮಸ್ಯೆ ಉಂಟಾಗುವುದಿಲ್ಲ ಎಂದರು.
ವೇದಿಕೆ ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಪ್ರೊ. ಎಚ್.ರಾಚಪ್ಪ, ಎನ್.ಉಮಾಪತಿ, ಆರ್.ಟಿ.ನಟರಾಜ್, ಜನಮೇಜಿರಾವ್, ಎಚ್.ಎಂ.ರಂಗನಾಥ, ಪ್ರೊ. ಡಿ.ಆರ್.ಉಮೇಶ್ ಇದ್ದರು.