ಸ್ಮಾರ್ಟ್‌ಸಿಟಿ ಅವಾಂತರ ಖಂಡಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ

Human Rights Welfare Organization
ಸ್ಮಾರ್ಟ್‌ಸಿಟಿಯ ಅವಾಂತರ ಖಂಡಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ ನಿಯಂತ್ರಣ ಸಂಸ್ಥೆ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಾಧಿಕ್, ಎಸ್.ಎಂ. ಅಹಮ್ಮದ್, ಇಮ್ರಾನ್, ಮಮತಾ ಇದ್ದರು.
Published on

ಶಿವಮೊಗ್ಗ: ಸ್ಮಾರ್ಟ್‌ಸಿಟಿಯ ಅವಾಂತರದಿಂದ ಸಣ್ಣಮಳೆ ಬಂದರೂ ಜನಸಾಮಾನ್ಯರ ಬದುಕು ಅಸ್ತವ್ಯಸ್ಥವಾಗುತ್ತಿದ್ದು, ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ ನಿಯಂತ್ರಣ ಸಂಸ್ಥೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಕೆಲ ದಿನಗಳಿಂದ ಬೀಳುತ್ತಿರುವ ಮಳೆಯಿಂದ ಜನಸಾಮಾನ್ಯರ ಬದುಕು ಅಸ್ತವ್ಯಸ್ಥವಾಗಿದೆ. ಅದರಲ್ಲೂ ಅಣ್ಣಾನಗರ, ಆರ್‌ಎಂಎಲ್‌ನಗರ, ಮಂಜುನಾಥ ಬಡಾವಣೆ, ಚಾನಲ್ ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ಸಂಕಷ್ಟವೇ ಆಗಿದೆ. ಮಳೆ ಬಂತೆಂದರೆ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಮನೆಯಲ್ಲಿರುವ ವಸ್ತುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುತ್ತವೆ ಎಂದು ದೂರಿದರು.

ಸ್ಮಾರ್ಟ್‌ಸಿಟಿಯ ಅವಾಂತರ ಮತ್ತು ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣವಾಗಿದೆ. ಬೇಕಾಬಿಟ್ಟಿಯಾಗಿ ಲೇವೌಟ್‌ಗಳು ನಿರ್ಮಾಣವಾಗುತ್ತಿವೆ. ಸ್ಮಾರ್ಟ್‌ಸಿಟಿ ಎಂಬುವುದು ಕೇವಲ ಕಡತಕ್ಕೆ ಸೀಮಿತವಾಗಿದೆ. ಚಾನಲ್, ರಾಜಕಾಲುವೆ ಹಾಗೂ ಚರಂಡಿಗಳಿಗೆ ತಡೆಗೋಡೆ ಕಟ್ಟಬೇಕು. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಜಿಲ್ಲಾಡಳಿತ ಈ ಬಗ್ಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಕಾರ್ಯದರ್ಶಿ ಸಾಧಿಕ್, ಎಸ್.ಎಂ. ಅಹಮ್ಮದ್, ನಗರಾಧ್ಯಕ್ಷ ಇಮ್ರಾನ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net