

ಶಿವಮೊಗ್ಗ: ಶರಾವತಿ ಮುಳುಗಡೆ ಮೂಲ ಸಂತ್ರಸ್ತರ ಜಮೀನುಗಳನ್ನು ಸರ್ವೇ ಕಾರ್ಯದಿಂದ ಕೈಬಿಡಲಾಗುತ್ತಿದೆ. ಮೂಲ ಸಂತ್ರಸ್ತರಿಗೆ ಹಕ್ಕುಪತ್ರ ಕೊಡದಿದ್ದರೆ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಹೋರಾಟ ಮಾಡುತ್ತೇವೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಸಿದರು.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ 65 ವರ್ಷಗಳ ನಂತರ ರಾಜ್ಯ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಇದೀಗ 9,129 ಎಕರೆ ಅರಣ್ಯ ಭೂಮಿಯನ್ನು ಡಿನೋಟಿಫಿಕೇಶನ್‌ಗೆ ಸರ್ವೇ ಮಾಡಲು ಆರಂಭಿಸಿದೆ. ಆದರೆ ಜಿಲ್ಲಾದ್ಯಂತ ಸಾವಿರಾರು ರೈತರ ಜಮೀನು ಅಳತೆ ಮಾಡುವುದನ್ನೇ ಕೈಬಿಡಲಾರಂಭಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಯಾವ ಮಾನದಂಡ ಇಟ್ಟುಕೊಂಡು ಜಿಲ್ಲಾಡಳಿತ ಸರ್ವೇ ಮಾಡಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಹಿಂದೆಯೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ, ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಒಂದು ವರ್ಷ ಶಿವಮೊಗ್ಗದಲ್ಲಿ ಹತ್ತಾರು ಸಭೆ ನಡೆಸಿ, ಪೂರ್ಣ ಅಧ್ಯಯನ ಮಾಡಿ ಮೂರು ಹಂತದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಈಗ ಒಂದು ಹಂತದಲ್ಲಿ ಮಾತ್ರ ಸಮಸ್ಯೆ ಬಗೆಹರಿಸಲು ಸರ್ವೇ ಮಾಡಲಾಗುತ್ತಿದೆ. ಅದಕ್ಕೂ ಸರಿಯಾದ ಮಾನದಂಡ ಬಳಸುತ್ತಿಲ್ಲ ಎಂದು ಕಿಡಿಕಾರಿದರು.
ಒಂದೆಡೆ ಸಚಿವ ಮಧು ಬಂಗಾರಪ್ಪ, ಮತ್ತೊಂದೆಡೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಇನ್ನೊಂದೆಡೆ ಶಾಸಕರ ಹಂತದಲ್ಲಿ ಲಾಭ ಪಡೆದುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ. ಸಮಸ್ಯೆಯನ್ನು ಮೊದಲು ಸಚಿವರು, ಸಂಸದರು, ಅಧಿಕಾರಿಗಳು ತಿಳಿದುಕೊಳ್ಳಬೇಕು. ಮದನ್ ಗೋಪಾಲ್ ವರದಿಯನ್ನು ಜಾರಿ ಮಾಡಬೇಕು. ಏಕಪಕ್ಷೀಯವಾಗಿ ಅಧಿಕಾರಿಗಳು ನಡೆದುಕೊಂಡರೆ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದರು.
ಮುಳುಗಡೆ ಸಂತ್ರಸ್ತರಾದ ಪ್ರವೀಣ್ ಬ್ಯಾಡನಾಳ, ಶಿವಪ್ಪ ಚೋಡನಾಳ, ರಾಮಪ್ಪ ಚೋಡನಾಳ, ಕೃಷ್ಣಮೂರ್ತಿ, ಸ್ವಾಮಿ, ಸೋಮಶೇಖರ್, ರಾಜಪ್ಪ, ರಾಮಚಂದ್ರಪ್ಪ, ಜಯರಾಮ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.