ರೈತರ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ

ptrotest
ಎಸ್.ವಿಜಯ್‌ಕುಮಾರ್
Published on

ಚಿಕ್ಕಮಗಳೂರು: ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ಸೆ.13ರಂದು ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಸ್ತೂರಿ ರಂಗನ್ ವರದಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್‌ಕುಮಾರ್ ಹೇಳಿದರು.

ಅರಣ್ಯ ಮತ್ತು ಕಂದಾಯ ಇಲಾಖೆ ಜಾಗದ ಜಂಟಿ ಸಮೀಕ್ಷೆ ನಡೆಸಿ ಗೋಮಾಳ, ನಿವೇಶನ, ರಸ್ತೆ, ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಜಾಗ ಗುರುತಿಸಿ ಮೀಸಲಿಡಬೇಕು. ಜಾಗದ ಲಭ್ಯತೆ ಆಧರಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆ ಆಗದಂತೆ ಹಕ್ಕುಪತ್ರ ವಿತರಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕ ಸಂಖ್ಯೆಯಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು. ಹುಲ್ಲುಗಾವಲು ಬೆಳೆಸಬೇಕು. ತಾಲೂಕಿನ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಡೀಮ್ಡ್ ಮತ್ತು ಮೀಸಲು ಅರಣ್ಯ ಜಾಗದ ಸಮಸ್ಯೆಯಿಂದಾಗಿ ನಿವೇಶನ ಹಂಚಿಕೆ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ನಮೂನೆ 53, 57 ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ ಎಂದು ದೂರಿದರು.
ಮೀಸಲು ಅರಣ್ಯ ಘೋಷಣೆಗೆ ಸೆಕ್ಷನ್ 4(1) ಅಧಿಸೂಚನೆ ಹೊರಡಿಸಿ ಜಾಗ ಗುರುತಿಸಲು ಅರಣ್ಯ ವ್ಯವಸ್ಥಾಪನ ಅಧಿಕಾರಿ (ಎಫ್‌ಎಸ್‌ಒ) ನೇಮಿಸಲಾಗಿತ್ತು. 3 ವರ್ಷ ಕಳೆದರೂ ಅಂತಿಮವಾಗಿರುವ ಬ್ಲಾಕ್‌ಗಳ ಸ್ಪಷ್ಟ ಮಾಹಿತಿ ಸಾರ್ವಜನಿಕರಿಗೆ ನೀಡಿಲ್ಲ. ಅಂದು ಪ್ರತಿಭಟನೆ ಸ್ಥಳಕ್ಕೆ ಎಫ್‌ಎಸ್‌ಒ ಹಾಗೂ ಡಿಎಫ್‌ಒ ಬಂದು ಮಾಹಿತಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಗೆ ಅರಣ್ಯ ಸಚಿವರು ಭೇಟಿ ನೀಡುವ ಮಾಹಿತಿ ಇದ್ದು ಹೋರಾಟಗಾರರು ಮತ್ತು ಅರಣ್ಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಸಿಡಿಎ ವ್ಯಾಪ್ತಿಗೆ ಬರುವ ಹೊರವಲಯದ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಬಾರದು ಮನವಿ ಮಾಡಿದರು.
ಸಮಿತಿ ಸಂಚಾಲಕರಾದ ಕೆ.ಕೆ.ರಘು, ಶಾಂತಕುಮಾರ್, ವೀರಭದ್ರಪ್ಪ, ಇಳೇಖಾನ್ ಚಂದ್ರು, ಕುಮಾರ್, ಮುಸಾದಿಕ್ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net