ಸಾಗುವಳಿ ರೈತರಿಗೆ ಹಕ್ಕುಪತ್ರಕ್ಕೆ ಪ್ರತಿಭಟನೆ

farmers protest
ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೊರಬ ತಾಲೂಕು ಬೊಮ್ಮನಹಳ್ಳಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತೀ.ನಾ.ಶ್ರೀನಿವಾಸ್, ರೈತರಾದ ಸಂತೋಷ್, ಕೃಷ್ಣಪ್ಪ ದ್ಯಾವಪ್ಪ, ಮಂಜಪ್ಪ, ದತ್ತಪ್ಪ ಚಿನ್ನಪ್ಪ, ನಾರಾಯಣ್, ನಾಗರಾಜ್ ಇದ್ದರು.
Published on

ಶಿವಮೊಗ್ಗ: ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 18 ವರ್ಷವಾದರೂ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಹಾಗಾಗಿ ಕೂಡಲೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೊರಬ ತಾಲೂಕು ಬೊಮ್ಮನಹಳ್ಳಿ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬಿಜೆಪಿ ಸರ್ಕಾರ 3 ಲಕ್ಷ ರೈತರ ಅರ್ಜಿಗಳನ್ನು ಕಾನೂನು ಬಾಹಿರವಾಗಿ ವಜಾ ಮಾಡಲಾಗಿತ್ತು. ವಜಾ ಮಾಡಿದ್ದು ಸಿಂಧುವಲ್ಲ ಎಂದು ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದರು. ಆದರೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆ ಎಂದು ಮತ್ತೆ ಕೆಲವು ಅರ್ಜಿಗಳನ್ನು ವಜಾಗೊಳಿಸಲಾಯಿತು ಎಂದು ದೂರಿದರು.
ರಾಜ್ಯ ಸರ್ಕಾರ, ತಾಪಂ, ಜಿಪಂ ಚುನಾಯಿತ ಸದಸ್ಯರು, ಉಪ ವಿಭಾಗ ಮಟ್ಟದ ಸಮಿತಿ ಜಿಲ್ಲಾಧಿಕಾರಿಮಟ್ಟದ ಸಮಿತಿ ಸದಸ್ಯರು ಭಾಗಿಯಾಗದೇ ಅರಣ್ಯಹಕ್ಕು ಅರ್ಜಿಗಳನ್ನು ವಜಾ ಮಾಡುವುದು ಸಿಂಧುವಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಸಮಿತಿಗಳ ರಚನೆಗೆ ಒಂದು ವರ್ಷದ ಅವಧಿ ಕೇಳಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲಿಸಿತ್ತು. ಈ ನಡುವೆ ರೈತರು ಹಕ್ಕುಪತ್ರಕ್ಕೆ ಸಲ್ಲಿಸಿದ್ದ ಅರ್ಜಿಗಳನ್ನು ಸಾಗರ ಉಪ ವಿಭಾಗಾಧಿಕಾರಿಗಳು ಕಾನೂನು ಬಾಹಿರವಾಗಿ ವಜಾ ಮಾಡಿದ್ದಾರೆ. ಅದನ್ನು ಪರಿಶೀಲಿಸಿ ರೈತರ ಅರ್ಜಿ ಮಾನ್ಯ ಮಾಡಿ ಕೂಡಲೇ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.
ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್, ರೈತರಾದ ಸಂತೋಷ್, ಕೃಷ್ಣಪ್ಪ ದ್ಯಾವಪ್ಪ, ಮಂಜಪ್ಪ, ದತ್ತಪ್ಪ ಚಿನ್ನಪ್ಪ, ನಾರಾಯಣ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net