

ಶಿವಮೊಗ್ಗ: ನಗರದ ಹೊರವಲಯದ ಅನುಪಿನಕಟ್ಟೆ ಕಸ ವಿಲೇವಾರಿ ಘಟಕದಿಂದಾಗಿ ಹಂದಿಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಸುತ್ತಮುತ್ತ ಇರುವ ಮೆಕ್ಕೆಜೋಳದ ಬೆಳೆಯನ್ನು ಹಂದಿಗಳು ನಾಶಪಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹನುಮಂತಾಪುರ ಗ್ರಾಮಸ್ಥರು ಕಸ ವಿಲೇವಾರಿ ಘಟಕಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಕಸ ವಿಲೇವಾರಿ ಘಟಕದಲ್ಲಿ ಅಕ್ರಮವಾಗಿ ಹಂದಿಗಳನ್ನು ಸಾಕಲಾಗುತ್ತಿದೆ. ಈ ಹಂದಿಗಳು ಜೋಳದ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೃಷಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಲಾಗಿದೆ. ಮಳೆಯಿಂದಾಗಿ ಸ್ವಲ್ಪ ಬೆಳೆ ನಾಶವಾಗಿದೆ. ಉಳಿದ ಬೆಳೆ ಹಂದಿಗಳ ಕಾಟದಿಂದ ಖಾಲಿಯಾಗಿದೆ. ಕಸ ವಿಲೇವಾರಿ ಘಟಕದಲ್ಲಿನ ಗೋಡೆಗಳು ಒಡೆದಿರುವುದರಿಂದ ಹಂದಿಗಳು ಹೊರಗೆ ಬರುತ್ತಿವೆ. ಕಸವಿಲೇವಾರಿ ಘಟಕದಲ್ಲಿನ ತ್ಯಾಜ್ಯದ ನೀರು ಚರಂಡಿಗೆ ಹರಿದು ಬಳಿಕ ತುಂಗಾನದಿ ಸೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ. ವಿಲೇವಾರಿ ಘಟಕಕ್ಕೆ ಕಸ ತರುವ ವಾಹನಗಳು ವೈಜ್ಞಾನಿಕವಾಗಿ ಕಸ ಸಾಗಣೆ ಮಾಡುತ್ತಿಲ್ಲ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾನಿರತರ ಅಹವಾಲು ಆಲಿಸಿದರು. ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬೀದಿನಾಯಿಗಳು, ಹಂದಿಗಳ ತೆರವು ಮಾಡುತ್ತೇವೆ ಎಂದು ತಿಳಿಸಿದರು. ಬಳಿಕ ಸ್ಥಳೀಯರು ಪ್ರತಿಭಟನೆ ಅಂತ್ಯಗೊಳಿಸಿದರು.