

ಶಿವಮೊಗ್ಗ: ನಗರ ಹೊರವಲಯದ ಮಲವಗೊಪ್ಪ ತುಂಗಾಭದ್ರಾ ಸಕ್ಕರೆ ಕಾರ್ಖಾನೆಯ ಜಾಗದಲ್ಲಿರುವ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಾಲೂಕು ಸಕ್ಕರೆ ಕಾರ್ಖಾನೆ ರೈತರ ಮತ್ತು ಕಾರ್ಮಿಕರ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಸೈನ್ಸ್ ಮೈದಾನದಿಂದ ಬಿ.ಎಚ್.ರಸ್ತೆ, ಅಮೀರ್ ಅಹಮ್ಮದ್ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ವಿವಿಧ ಪಕ್ಷ ಮತ್ತು ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿದರು.
ಗ್ರಾಮದ ಸರ್ವೇ ನಂ.33/186ರಲ್ಲಿರುವ ಮನೆಗಳು ಮತ್ತು ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು. ತುಂಗಾಭದ್ರಾ ಶುಗರ್ ವರ್ಕ್ಸ್ ಕಂಪನಿಯವರು ಏಕಾಏಕಿ ಜಮೀನು ಮತ್ತು ಮನೆಗಳನ್ನು ವಶಪಡಿಸಿಕೊಂಡು ಕಾರ್ಮಿಕ ಮತ್ತು ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಎಲ್ಲ ಆಸ್ತಿಗಳು ನಮ್ಮದೆ ಎಂದು ಹೇಳುತ್ತಿದ್ದಾರೆ. ಆದರೆ 50 ಎಕರೆ ಜಮೀನು ಮಾತ್ರ ಕಾರ್ಖಾನೆ ಆಡಳಿತ ಮಂಡಳಿಗೆ ಸೇರಿದೆ ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ತಿಳಿಸಿದೆ. ಹೈಕೋರ್ಟ್‌ನಲ್ಲಿ ಈ ಕೇಸ್ ವಿಚಾರಣೆಯ ಹಂತದಲ್ಲಿದೆಯೇ ಹೊರತು ಯಾವುದೇ ಆದೇಶವಾಗಿಲ್ಲ. ಕೆಲವರು ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆಂದು ಕಿಡಿಕಾರಿದರು.
ಕಂಪನಿಯ ಆಸ್ತಿ ಎಲ್ಲವೂ ಸರ್ಕಾರಿ ಜಾಗವೇ ಆಗಿದೆ. 40ರಿಂದ 50 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ರೈತರು, ಕಾರ್ಮಿಕರು, ಜಮೀನುಗಳಿಗೆ ಖಾತೆ ಪಹಣಿ ಮಾಡಿಸಿಕೊಂಡಿದ್ದಾರೆ. ಇನ್ನುಳಿದ ಜಮೀನಿನಲ್ಲಿರುವ ಮನೆಗಳಿಗೆ ಮತ್ತು ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರು.
ಸಮಿತಿ ಪದಾಧಿಕಾರಿಗಳಾದ ಎಂ.ಬಿ.ಕೃಷ್ಣಪ್ಪ, ಎನ್.ಟಿ.ಕುಮಾರ್, ಮಹಾದೇವ್, ಎಂ.ಕೃಷ್ಣಮೂರ್ತಿ, ನಾಗೇಂದ್ರ, ಎಂ.ದೇವರಾಜ್, ಮುಖಂಡರಾದ ಎಚ್.ಸಿ.ಯೋಗೇಶ್, ಎಂ.ಎಸ್.ಶಿವಕುಮಾರ್, ಸ್ಥಳೀಯರಾದ ಎಸ್.ಸುಧೀಂದ್ರ, ನೀಲಮ್ಮ, ಲಕ್ಷ್ಮಮ್ಮ, ಪುಟ್ಟಸ್ವಾಮಿ, ಸುಜಾತಾ, ರಂಗಯ್ಯ, ನಾಸೀರ್, ಸರೋಜಮ್ಮ, ಜೀವಮ್ಮ, ಪುಷ್ಪಲತಾ, ಸುಮಿತ್ರಮ್ಮ, ರಾಜಾಚಾರಿ, ರೇಣುಕಾ, ಮಂಜುಳಾ, ವನಜಾಕ್ಷಿ, ಕನ್ಯಾಕುಮಾರಿ, ಬಿ.ಎ.ವೀಣಾ, ನಾಗವೇಣಿ, ಚಂದ್ರಮ್ಮ, ಶಿವಲಿಂಗಮ್ಮ, ಲೀಲಾಬಾಯಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.