

ಶಿವಮೊಗ್ಗ: ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಹಾಗೂ ದಾಖಲೆಗಳನ್ನು ಅಪ್‌ಲೋಡ್‌ಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಿಇಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ಉಂಟಾದ ಎಡವಟ್ಟು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ. ಕೈಬಿಡಲಾಗಿದ್ದ ಪಠ್ಯಕ್ರಮದಿಂದ ಸಿಇಟಿಯಲ್ಲಿ 50 ಪ್ರಶ್ನೆಗಳನ್ನು ಕೇಳಿರುವುದು ವಿವಾದಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಸ್ನೇಹಿಯಾಗಬೇಕಿದ್ದ ಪ್ರಾಧಿಕಾರದ ಕೆಲ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀಟ್‌ನಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ ಹೆಚ್ಚುವರಿ ಅಂಕ ನೀಡಿರುವುದರಿಂದ ರ‌್ಯಾಂಕಿಂಗ್‌ನಲ್ಲಿ ಗಣನೀಯ ಹೆಚ್ಚಳ ಆಗಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಹೆಚ್ಚಿನ ಶುಲ್ಕ ಪಾವತಿಸಿದರೂ ವೈದ್ಯಕೀಯ ಸೀಟು ಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಕೂಡಲೇ ಕೆಇಎಗೆ ನಿರ್ದೇಶನ ನೀಡಬೇಕು. ಗೊಂದಲ ನಿವಾರಣೆ ಮಾಡಬೇಕು. ದಾಖಲಾತಿ ಪರಿಶೀಲನೆ, ಪ್ರಮಾಣ ಪತ್ರಗಳ ಅಪ್ಲೋಡ್ ಹಾಗೂ ತಿದ್ದುಪಡಿಗೆ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ಪ್ರಮುಖರಾದ ಆರ್.ಎಂ.ಸುಹಾಸ್ ಗೌಡ, ನಾಗರಾಜ್ ನಾಯ್ಕ, ಸಾಹಿಲ್, ಪ್ರಜ್ವಲ್, ಜಯಂತ್, ನವೀನ್, ರಾಘವೇಂದ್ರ ಪ್ರತಿಭಟನೆಯಲ್ಲಿದ್ದರು.