ಬಾರ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

winse shop
ಶಾಲೆ ಹಾಗೂ ಧಾರ್ಮಿಕ ಸ್ಥಳದ ಸಮೀಪವೇ ಮದ್ಯದಂಗಡಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಮದಾರಿಪಾಳ್ಯದ ನಿವಾಸಿಗಳು ಪ್ರತಿಭಟನೆ ನಡೆಸಿದರು. ರಜಾಕ್, ಕೃಷ್ಣಪ್ಪ, ಮುಸ್ತಫಾ, ಗೋವಿಂದಪ್ಪ, ಸುರೇಶ್, ಚಂದ್ರಣ್ಣ, ಇಲಿಯಾಸ್ ಇತರರಿದ್ದರು.
Published on

ಶಿವಮೊಗ್ಗ: ಬೈಪಾಸ್ ರಸ್ತೆಯ ವಾರ್ಡ್ ನಂ.34 ಮತ್ತು 35ರ ಮದಾರಿಪಾಳ್ಯದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಶಾಲೆ, ಅಂಗನವಾಡಿ, ದೇವಸ್ಥಾನ ಹಾಗೂ ದರ್ಗಾ ಸಮೀಪವೇ ಮದ್ಯದಂಗಡಿ ತೆರೆಯಲಾಗಿದೆ. ಶಾಲೆ, ಧಾರ್ಮಿಕ ಕೇಂದ್ರಗಳ 100 ಮೀಟರ್ ವ್ಯಾಪ್ತಿಯಲ್ಲಿ ಬಾರ್ ತೆರೆಯಬಾರದು ಎಂಬ ನಿಬಂಧನೆಯಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಮದ್ಯ ಸೇವನೆ ಮಾಡಿದವರ ವರ್ತನೆಯಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು, ಧಾರ್ಮಿಕ ಕೇಂದ್ರಗಳಿಗೆ ತೆರಳುವ ಶ್ರದ್ಧಾಳುಗಳಿಗೆ ಇರುಸು ಮುರುಸು ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಒಂದು ಬಾರ್ ತೆರೆಯಲಾಗಿದೆ. ಮತ್ತೊಂದು ಬಾರ್ ತೆರೆಯಲು ಪರವಾನಗಿಯನ್ನೂ ಪಡೆದುಕೊಳ್ಳಲಾಗಿದೆ. ಇದರಿಂದ ಸ್ಥಳೀಯ ವಾತಾವರಣವೇ ಹಾಳಾಗುವ ಭೀತಿಯಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜನರ ಅಹವಾಲು ಆಲಿಸಿದರು. ಹಿರಿಯ ಅಧಿಕಾರಿಗಳಿಗೆ ವಸ್ತುಸ್ಥಿತಿ ವಿವರಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆ ಸ್ಥಗಿತಗೊಳಿಸಿದರು.
ರಜಾಕ್, ಕೃಷ್ಣಪ್ಪ, ಮುಸ್ತಫಾ, ಗೋವಿಂದಪ್ಪ, ಸುರೇಶ್, ಚಂದ್ರಣ್ಣ, ಇಲಿಯಾಸ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net