ಕಾಂತರಾಜ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

dss
ಕಾಂತರಾಜ ಆಯೋಗದ ವರದಿ ಜಾರಿ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕೆ ಒತ್ತಾಯಿಸಿ ಎಂ.ಗುರುಮೂರ್ತಿ, ಚಂದ್ರಪ್ಪ ಜೋಗಿ, ಶಿವಬಸಪ್ಪ, ನಾಗರಾಜ, ಎಂ.ಏಳುಕೋಟಿ ಇತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಕಾಂತರಾಜ ವರದಿ ಜಾರಿಗೊಳಿಸಬೇಕು. ಅವಹೇಳನಕಾರಿ ಹೇಳಿಕೆ ನೀಡಿರುವ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಡಿಎಸ್‌ಎಸ್ ಕಾರ್ಯಕರ್ತರು ಗುರುವಾಗ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

2014ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ರ್ಕಾರ ಕಾಂತರಾಜ ನೇತೃತ್ವದಲ್ಲಿ ಆಯೋಗ ರಚಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಸಿತ್ತು. ಬಿಹಾರದಲ್ಲಿ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡಿದರೆ ಕರ್ನಾಟಕದಲ್ಲೂ ಕಾಂತರಾಜ ಆಯೋಗದ ವರದಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಂವಿಧಾನದ ಆಶಯದಂತೆ ಸಮಾಜದಲ್ಲಿ ಸಮಾನತೆ ಮೂಡಬೇಕು. ಸಂಪತ್ತು ಸಮನಾಗಿ ಹಂಚಿಕೆಯಾಗಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು. ಹಿಂದುಳಿದ ಜಾತಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಇದಕ್ಕೆ ಕಾಂತರಾಜ ವರದಿ ಪೂರಕವಾಗಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕಳೆದ ಡಿಸೆಂಬರ್ 24ರಂದು ಹಿಂದು ಜಾಗರಣ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂಘ ಪರಿವಾರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಮಹಿಳೆಯರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಕೋಮು ಭಾವನೆ ಕೆರಳಿಸಿದ್ದಾರೆ. ಹೀಗಾಗಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ಚಂದ್ರಪ್ಪ ಜೋಗಿ, ಶಿವಮೊಗ್ಗ ತಾಲೂಕು ಸಂಚಾಲಕ ನಾಗರಾಜ, ಡಿಎಸ್‌ಎಸ್ ಮುಖಂಡ ಶಿವಬಸಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net