

ಶಿವಮೊಗ್ಗ: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಟ ದರ್ಶನ್ ಹಾಗೂ ಸಹಚರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯಾವ ಕಾರಣಕ್ಕೂ ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಆಗ್ರಹಿ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಜಿಲ್ಲಾ ಬೇಡ ಜಂಗಮ ಸಮಾಜ, ಶಿವಾಲಯ ಸೇವಾ ಸಮಿತಿ, ಸೃಷ್ಟಿ ಮಹಿಳಾ ಸಮಾಜ, ಕದಳಿ ಸಮಾಜ, ಜಿಲ್ಲಾ ಮಹಿಳಾ ಜಂಗಮ ಸಮಾಜ ಮುಂತಾದ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ವೀರಶೈವ ಕಲ್ಯಾಣ ಮಂದಿರದಿಂದ ಮೆರವಣಿಗೆ ಆರಂಭಿಸಿ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿದರು. ನಂತರ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದರು. ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ರೇಣುಕಸ್ವಾಮಿ ಪ್ರಕರಣವನ್ನು ರಾಜ್ಯದ ಎಲ್ಲ ಮಾಧ್ಯಮಗಳು ನಿರಂತರವಾಗಿ ಪ್ರಸಾರ ಹಾಗೂ ಪ್ರಚಾರ ಮಾಡಿದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು. ಹತ್ಯೆ ಮಾಡಿದವರು ಕಾನೂನಿನ ಬಿಗಿಮುಷ್ಟಿಗೆ ಸಿಲುಕಿದರು. ಮುಂದೆಯೂ ಈ ತನಿಖೆ ಹಾದಿ ತಪ್ಪದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ವೀರಶೈವ ಸಮಾಜದ ಪ್ರಮುಖರಾದ ಎನ್.ಜೆ.ರಾಜಶೇಖರ್, ಎಚ್.ವಿ.ಮಹೇಶ್ವರಪ್ಪ, ಸಂತೋಷ್ ಬಳ್ಳೇಕೆರೆ, ಎಸ್.ಪಿ.ದಿನೇಶ್, ಮುರುಗೇಶ್, ಎಚ್.ಸಿ.ಯೋಗೇಶ್, ಅನಿತಾ ರವಿಶಂಕರ್, ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.