

ಸಾಗರ: ಸಾಗರ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಸೆ.18ರಂದು ಬೆಳಗ್ಗೆ 10.30ಕ್ಕೆ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಂತರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಸಾಗರ ಜಿಲ್ಲಾ ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್ ಹೇಳಿದರು.
ಮೊದಲು ಸಾಹಿತಿ ನಾ.ಡಿಸೋಜ ನೇತೃತ್ವದಲ್ಲಿ ಹೋರಾಟ ಆರಂಭವಾಗಿತ್ತು. ಅಂದು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಸಾಗರ ತಾಲೂಕಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಪ್ರತ್ಯೇಕ ಮಲೆನಾಡು ಜಿಲ್ಲೆ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದೀಗ ಅದಕ್ಕೆ ಕಾಲ ಕೂಡಿಬಂದಿದೆ. ಸಾಗರ, ಸೊರಬ, ಹೊಸನಗರ, ಶಿಕಾರಿಪುರ ಒಳಗೊಂಡ ಸಾಗರ ಜಿಲ್ಲೆಯಾಗಿ ಘೋಷಿಸಬೇಕು. ಸಿದ್ದಾಪುರ ತಾಲ್ಲೂಕಿನ ಜನರು ಸಹ ಸಾಗರ ಜಿಲ್ಲೆಯಲ್ಲಿ ಗುರುತಿಸಿಕೊಳ್ಳಲು ಆಸಕ್ತಿ ವಹಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಗರ ಜಿಲ್ಲೆಯಾಗಲು ಬೇಕಾದ ಸೌಲಭ್ಯಗಳಿವೆ. 1956ರಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ಇತ್ತು. ಅಂದಿನಿಂದ ನಾಲ್ಕೂ ತಾಲೂಕುಗಳಿಗೆ ಸಾಗರ ಉಪಕೇಂದ್ರವಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಆರ್‌ಟಿಒ, ಜಿಪಂ ಇಂಜಿನಿಯರಿಂಗ್ ವಿಭಾಗ, ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮತ್ತಿತರ ಕಚೇರಿಗಳಿವೆ. ಸರ್ಕಾರಿ ಪಿಯು ಕಾಲೇಜು, ಶ್ರೀಮತಿ ಇಂದಿರಾ ಗಾಂಧಿ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಎಲ್ಲ ತಾಲೂಕುಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಳದಿ ಅರಸರ ಕಾಲದಲ್ಲಿ ಸಾಗರವನ್ನು ಕೇಂದ್ರವಾಗಿ ಇರಿಸಿಕೊಂಡು 13 ಜಿಲ್ಲೆ ಆಡಳಿತ ನಡೆಸಿದ ದಾಖಲೆಯೂ ಇದೆ. ಸಾಗರ ಜಿಲ್ಲೆಯನ್ನು ಘೋಷಿಸಬೇಕು ಎಂದು ಕೇಳುವುದು ನಮ್ಮ ಹಕ್ಕು. ಹಾಲಿ ಶಾಸಕರು, ಮಾಜಿ ಶಾಸಕರು ಜಿಲ್ಲೆ ಪ್ರಸ್ತಾವನೆಗೆ ಬೆಂಬಲ ನೀಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಈಗಾಗಲೇ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರ ಜಿಲ್ಲೆ ರಚನೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಸಮಿತಿಯಿಂದ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಕನ್ನಪ್ಪ ಬೆಳಲಮಕ್ಕಿ, ಮಂಜುನಾಥ್, ಎಚ್.ಬಿ.ರಾಘವೇಂದ್ರ, ಕೆ.ವಿ.ಜಯರಾಮ್, ನಾಗರಾಜ್, ರಮೇಶ್, ಮಂಜಪ್ಪ, ಗಲ್ಲಿ ವೆಂಕಟೇಶ್, ಮಹ್ಮದ್ ಖಾಸಿಂ, ತಾರಾಮೂರ್ತಿ, ಶ್ರೀಧರ್, ಬಸವರಾಜ್ ಇತರರಿದ್ದರು.