

ಶಿವಮೊಗ್ಗ: ನಿವೇಶನ ರಹಿತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಕೊಡುವಂತೆ ಹಾಗೂ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸುವಂತೆ ಒತ್ತಾಯಿಸಿ ಶಿವಮೊಗ್ಗ ತಾಲೂಕಿನ ಹಸೂಡಿ ಫಾರಂ, ಅಮರಾವತಿ ಕ್ಯಾಂಪ್ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಸೂಡಿ ಗ್ರಾಮ ವ್ಯಾಪ್ತಿಯಲ್ಲಿ ಹಸೂಡಿ ಫಾರಂ ಸ.ನಂ.135 ಮತ್ತು ಸ.ನಂ.111ರಲ್ಲಿ ಸರ್ಕಾರಿ ಜಾಗ, ಗ್ರಾಮ ಠಾಣಾ ಜಾಗ ಸಹ ಲಭ್ಯವಿದೆ. ಗ್ರಾಮದಲ್ಲಿ ತುಂಬಾ ಬಡವರು ಕೂಲಿ ಕಾರ್ಮಿಕರು ನಿರ್ಗತಿಕರು ವಾಸವಾಗಿದ್ದು ಅವರಿಗೆ ವಾಸಕ್ಕೆ ಮನೆ ಅಥವಾ ನಿವೇಶನ ಇಲ್ಲ. ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ನಿವೇಶನ ಒದಗಿಸುವಂತೆ ಒತ್ತಾಯಿಸಿದರು.
ಪ್ರತಿ ವರ್ಷ ಗ್ರಾಪಂಗಳಲ್ಲಿ ನಿವೇಶನ ರಹಿತರ ಪಟ್ಟಿ ತಯಾರು ಮಾಡುತ್ತಾರೆ. ಸರ್ಕಾರಕ್ಕೆ ಕಳುಹಿಸಿ ನಿವೇಶನ ಜಾಗಕ್ಕೆ ಬೇಡಿಕೆ ಸಲ್ಲಿಸುತ್ತಿಲ್ಲ. ಆದ್ದರಿಂದ ತುಂಬಾ ತೊಂದರೆಯಾಗಿದ್ದು, ನಿವೇಶನ ಹಂಚಿಕೆ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿರುವುದಿಲ್ಲ ಎಂದು ದೂರಿದರು.
ಕೂಡಲೇ ಗ್ರಾಮ ಠಾಣಾ ಜಾಗದಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಲೇಔಟ್ ಆಗಿ ಮಾಡಿ ಬಡವರಿಗೆ ನಿವೇಶನ ವಿತರಣೆ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ 3 ಕೊಳವೆ ಬಾವಿ ಇದ್ದು ಒಂದು ಈಗಾಗಲೇ ಹಾಳಾಗಿದೆ. ಇನ್ನೆರಡರಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಹಾಗಾಗಿ ಹೊಸದಾಗಿ ಒಂದು ಕೊಳವೆ ಬಾವಿ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರಾದ ಸಂಜಯ್, ನಿರ್ಮಲಾ, ಹಂಸ, ಕಾರ್ತಿಕ್, ಪುಷ್ಪಾ, ಪಿ.ಭಾಗ್ಯ, ಎಸ್.ರವಿಕುಮಾರ್, ಕೆ.ರವಿ, ರಂಜಿತ್, ರಮೇಶ್, ಪಳನಿ, ರತ್ನಮ್ಮ, ಎನ್.ಆರ್.ಶಿವಾನಂದ, ಎಸ್.ಭರತ್, ಮಂಜುನಾಥ, ಜಾನಕಿ ಮತ್ತಿತರರಿದ್ದರು.