

ಶಿವಮೊಗ್ಗ: ಉದ್ಘಾಟನೆಯಾಗಿ ವರ್ಷ ಕಳೆದಿರುವ ಬಹುಮಹಡಿಗಳ ವಾಹನ ನಿಲ್ದಾಣ ಹಾಗೂ ಹೂವಿನ ಮಾರುಕಟ್ಟೆ ಸಂಕೀರ್ಣವನ್ನು ಕೂಡಲೇ ಬಾಡಿಗೆಗೆ ನೀಡಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಾಹನಗಳ ನಿಲುಗಡೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಪಾಲಿಕೆಯಿಂದ ಶಿವಪ್ಪನಾಯಕ ವೃತ್ತದ ಬಳಿ ವಾಹನ ನಿಲುಗಡೆ ಸಂಕೀರ್ಣ ಹಾಗೂ ನಗರದ ಸವಾರ್‌ಲೈನ್ ರಸ್ತೆಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಿದೆ. ಈ ಎರಡೂ ಕಟ್ಟಡಗಳು ಹಾಳುಬಿದ್ದಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವಾಗ ರಾಜಕಾರಣಿಗಳಿಗೆ ಇದ್ದ ಆಸಕ್ತಿ ನಿರ್ಮಾಣವಾದ ನಂತರ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡುವಾಗ ಇಲ್ಲದಂತಾಗಿದೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಕೂಡಲೇ ವಾಣಿಜ್ಯ ಸಂಕೀರ್ಣದ 96 ಮಳಿಗೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಶಿವಪ್ಪನಾಯಕ ವೃತ್ತದ ಬಳಿ ನಿರ್ಮಿಸಿರುವ ವಾಹನಗಳ ನಿಲುಗಡೆ ಸಂಕೀರ್ಣದಲ್ಲಿ ಉಚಿತವಾಗಿ ಇಲ್ಲವೇ ಕಡಿಮೆ ಶುಲ್ಕ ಪಡೆದು ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಗೋ. ರಮೇಶ್ ಗೌಡ, ಪ್ರಮುಖರಾದ ಸಂತೋಷ್, ನಿಂಗರಾಜ್, ಲಕ್ಷ್ಮಣ, ಕೃಷ್ಣಪ್ಪ, ರಾಜು ಗುಜ್ಜಾರ್, ಫಯಾಜ್, ರಾಜು ನಾಯಕ್, ಮುನೀರ್, ಆಸೀಫ್ ಪ್ರತಿಭಟನೆಯಲ್ಲಿದ್ದರು.