

ಶಿವಮೊಗ್ಗ: ನಗರದ ವಿವಿಧೆಡೆ ಭೂ ಒಳಭಾಗದಲ್ಲಿ ಕೇಬಲ್‌ಗಳನ್ನು ಅಳವಡಿಸಿದ್ದರೂ ವಿದ್ಯುತ್ ಕಂಬಗಳನ್ನು ತೆರವು ಮಾಡದೇ ಇರುವುದನ್ನು ಖಂಡಿಸಿದ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಹಾಗೂ ಬಂಟರ ಯಾನೆ ನಾಡವರ ಸಂಘದ ಪ್ರಮುಖರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯುತ್ ಕಂಬಗಳ ತೆರವಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಮೆಸ್ಕಾಂ ಅಧಿಕಾರಿಗಳ ಸಭೆ ಕರೆಯುವಂತೆ ಅನೇಕ ಬಾರಿ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಲಾಗಿದೆ. ಆದರೂ ಸಭೆ ಕರೆದಿಲ್ಲ. ವಿದ್ಯುತ್ ಕಂಬಗಳನ್ನು ತೆರವು ಮಾಡದೇ ಇರುವುದರಿಂದ ವಾಹನ ಸಂಚಾರಕ್ಕೆ ಹಾಗೂ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೆಸ್ಕಾಂ ಹಾಗೂ ಸ್ಮಾರ್ಟ್‌ಸಿಟಿಯಿಂದ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಗರದ ವಿವಿಧೆಡೆ ಭೂಗತ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆಯ ಎರಡೂ ಬದಿಯಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ತೆರವು ಮಾಡದೇ ಹಾಗೆಯೇ ಬಿಡಲಾಗಿದೆ ಎಂದು ದೂರಿದರು.
ವಿದ್ಯುತ್ ಕಂಬಗಳ ತೆರವಿಗೆ ಸಂಬಂಧಿಸಿದಂತೆ ಸಭೆ ನಡೆಸಲು ಕೂಡಲೇ ದಿನಾಂಕ ನಿಗದಿಪಡಿಸಬೇಕು. ಕಂಬಗಳ ತೆರವಿಗೆ ಸಮಯ ನಿಗದಿಪಡಿಸಬೇಕು. ಈ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಪ್ರಮುಖರಾದ ಡಾ.ಎ.ಸತೀಶ್‌ಕುಮಾರ್‌ಶೆಟ್ಟಿ, ಎಸ್.ಬಿ. ಅಶೋಕ್‌ಕುಮಾರ್, ಸೀತಾರಾಮ್, ಜನಮೇಜಿರಾವ್, ಡಾ.ಶ್ರೀನಿವಾಸ್, ಸ್ವಾಮಿ, ನಾಗರಾಜ್, ಚನ್ನವೀರಪ್ಪ ಗಾಮನಗಟ್ಟಿ, ಪುಷಾ ್ಪಶೆಟ್ಟಿ, ವಿಜಯಾ ಶೆಟ್ಟಿ, ವಾತ್ಸಲ್ಯ ಶೆಟ್ಟಿ, ಪ್ರೊ.ಸತ್ಯನಾರಾಯಣ್ ಮುಂತಾದವರು ಪಾಲ್ಗೊಂಡಿದ್ದರು.