

ಶಿವಮೊಗ್ಗ: ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಬರುವ ಅಸಂಘಟಿತ ಕಾರ್ಮಿಕ ವಿಭಾಗಗಳಲ್ಲಿ ಇರುವ ಹಮಾಲಿ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಮಂಡಳಿಯ ವ್ಯಾಪ್ತಿಗೆ ಸೇರ್ಪಡೆೆ ಮಾಡಬೇಕು ಎಂದು ಒತ್ತಾಯಿಸಿ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾ ಶಾಖೆ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಸಂಘಟಿತ ಕಾರ್ಮಿಕರಿಗೆ ನೀಡುತ್ತಿರುವ ಅಪಘಾತ ವಿಮೆ, ಆಸ್ಪತ್ರೆ ವೆಚ್ಚ ಅತ್ಯಲ್ಪವಾಗಿದೆ. ಶೇ.75ರಷ್ಟು ಆಸ್ಪತ್ರೆ ವೆಚ್ಚವನ್ನು ಸರ್ಕಾರದಿಂದಲೇ ಪಾವತಿ ಮಾಡಬೇಕು. ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿಯಲ್ಲಿ ಬರುವ ಎಲ್ಲ ಕಾರ್ಮಿಕರಿಗೂ ಇದನ್ನು ಅನ್ವಯ ಮಾಡಬೇಕೆಂದು ಒತ್ತಾಯಿಸಿದರು.
ಆಸ್ತಿ ತೆರಿಗೆಯಲ್ಲಿ ಅಸಂಘಟಿತ ಕಾರ್ಮಿಕರ ಸೆಸ್‌ನ್ನು ಸೇರಿಸಿ ಸಂಪನ್ಮೂಲ ಸಂಗ್ರಹಿಸಬೇಕು. ಸಾಮಾಜಿಕ ಭದ್ರತಾ ಮಂಡಳಿಯ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ನೀಡುತ್ತಿರುವ 5 ಲಕ್ಷ ರೂ. ಅಪಘಾತ ವಿಮೆ ಮತ್ತು ಆಸ್ಪತ್ರೆ ವೆಚ್ಚವನ್ನು ಹೆಚ್ಚಿಸಬೇಕು. ಸಾಂತ್ವನ ಪರಿಹಾರವನ್ನು ಒಂದು ಲಕ್ಷ ರೂ.ಗೆ ಏರಿಸಬೇಕು. ಕಾರ್ಮಿಕರಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಲು ಪ್ರತಿ ತಾಲೂಕಿಗೆ ಓರ್ವ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು, ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಇಂದ್ರ ಬಸವನಗೌಡ, ಚೇತನ್ ಲಕ್ಕಪ್ಪ, ವೈ.ಚಂದ್ರಶೇಖರ್, ಲತಾ, ನಾಗಭೂಷಣ್, ಅಶ್ವಿನಿಗೌಡ, ರಘು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.