ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹ

ಹುಣಸೂರು ನಗರದಲ್ಲಿ ಪ್ರಗತಿಪರ ಸಂಘಟನೆಗಳು ತಾಲೂಕಿನ ವಿವಿಧ ಸಮಸ್ಯೆಗಳ ಈಡೇರಿಕಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹೊಸೂರುಕುಮಾರ್, ನಿಂಗರಾಜ ಮಲ್ಲಾಡಿ, ಹರಿಹರ ಆನಂದಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ ಇತರರು ಇದ್ದಾರೆ.
ಹುಣಸೂರು ನಗರದಲ್ಲಿ ಪ್ರಗತಿಪರ ಸಂಘಟನೆಗಳು ತಾಲೂಕಿನ ವಿವಿಧ ಸಮಸ್ಯೆಗಳ ಈಡೇರಿಕಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹೊಸೂರುಕುಮಾರ್, ನಿಂಗರಾಜ ಮಲ್ಲಾಡಿ, ಹರಿಹರ ಆನಂದಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ ಇತರರು ಇದ್ದಾರೆ.
Published on

ಹುಣಸೂರು: ಅಕ್ರಮ, ಸಕ್ರಮ ಸಮಿತಿ ರಚನೆ, ಚಿಲ್ಕುಂದವನ್ನು ಹೊಸ ಹೋಬಳಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಹಾಗೂ ಕಾರ್ಮಿಕರ ಸಂಘಟನೆಗಳಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಸಂವಿಧಾನ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪ್ರತಿಭಟನೆ ಆರಂಭಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ತಾಲೂಕು ಕಚೇರಿ ಮುಂಭಾಗ ಸೇರಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕಿನಲ್ಲಿ ದಶಕಗಳಿಂದ ಪರಿಹಾರವಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಎರಡು ವರ್ಷಗಳಿಂದ ನಿರ್ಮಾಣ ಪೂರ್ಣಗೊಳ್ಳದೇ ಕುಳಿತಿರುವ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರ ಸೇವೆಗೆ ಸಮರ್ಪಿಸುವ ಕಾರ್ ಆಗಬೇಕಿದೆ. ಅರಸು ಕಲಾಮಂದಿರ ಧೂಳು ಹಿಡಿಯತ್ತಿದೆ. ಜಮೀನುಗಳಿಗೆ ಹೋಗಲು ರಸ್ತೆ ಇಲ್ಲ. ಅಕ್ರಮ ಸಕ್ರಮ ಸಮಿತಿ ರಚನೆ ಆಗದೇ ರೈತರಿಗೆ ಸಾಗುವಳಿ ಸಿಗುತ್ತಿಲ್ಲ. ಸಾವಿರಾರು ಕುಟುಂಬಗಳಿಗೆ ದಶಕಗಳಿಂದ ವಸತಿ ಸೌಲಭ್ಯ ಸಿಗದೇ ಬೀದಿಯಲ್ಲಿ ಬದುಕುವ ದುಸ್ಥಿತಿ ಬಂದಿದೆ. ಅಧಿಕಾರಿಗಳು ಮತ್ತು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕೊನೆಯಿಲ್ಲವೇ? ಬಡವರು ಬದುಕುವುದು ಬೇಡವೇ ಎಂದು ಪ್ರಶ್ನಿಸಿ, ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಜಿಲ್ಲಾಡಳಿತ ಕೂಡಲೆ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ಹರಿಹರ ಆನಂದಸ್ವಾಮಿ, ಉಂಡುವಾಡಿ ಚಂದ್ರೇಗೌಡ, ನಿಂಗರಾಜ ಮಲ್ಲಾಡಿ, ಅತ್ತಿಕುಪ್ಪೆ ರಾಮಕೃಷ್ಣ, ವಿಷಕಂಠಪ್ಪ, ರತ್ನಪುರಿ ಪುಟ್ಡಸ್ವಾಮಿ ಮಾತನಾಡಿದರು.

ಸ್ಥಳಕ್ಕಾಗಮಿಸಿದ ಶಾಸಕ: ಶಾಸಕ ಜಿ.ಡಿ.ಹರೀಶ್‌ಗೌಡ ಮಧ್ಯಾಹ್ನದ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿ ಕುಳಿತರು. ಈ ವೇಳೆ ಮಾತನಾಡಿದ ಅವರು, ಕಳೆದ ವರ್ಷದ ವಿಧಾನಸಭೆ ಅಧಿವೇಶನದ ವೇಳೆ ನಗರದ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ 9 ಕೋಟಿ ರೂ.ಗಳ ಅನುದಾನ ಕೋರಿ ಚರ್ಚಿಸಿದ್ದೆ. ವರ್ಷದೊಳಗೆ ನೀಡಲಾಗುವುದು ಆರೋಗ್ಯ ಸಚಿವರೇ ಭರವಸೆ ನೀಡಿದ್ದರು. ಈವರೆಗೆ ನೀಡಿಲ್ಲ. ಅರಸು ಕಲಾಭವನದ ಕಥೆಯೂ ಅದೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹುಣಸೂರು ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲೂ ಅಕ್ರಮ ಸಕ್ರಮ ಸಮಿತಿ ರಚನೆಯಾಗಿ ಸಾಗುವಳಿ ಪತ್ರ ನೀಡುತ್ತಿದ್ದಾರೆ. ಆದರೆ ಹುಣಸೂರು ತಾಲೂಕಿಗೆ ಮಾತ್ರ ಅಕ್ರಮ ಸಕ್ರಮ ಸಮಿತಿ ರಚಿಸಲು ಸರ್ಕಾರಕ್ಕೆ ಮನಸ್ಸಾಗುತ್ತಿಲ್ಲ. ಏನು ಮಾಡೋಣ ? ಪಂಪ್‌ಸಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಸರ್ಕಾರ ಜಾರಿಗೊಳಿಸಿರುವ ನೂತನ ನೀತಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತು ರಾಜ್ಯಮಟ್ಟದಲ್ಲಿ ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಬೇಕಿದೆ. ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತಾಲೂಕಿನಲ್ಲಿ ವಸತಿ ಸಮಸ್ಯೆ ಪರಿಹರಿಸಲು ಸಂಘಟನೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಅಭಿವೃದ್ಧಿಯಲ್ಲಿ ರಾಜಕಾರಣ ಬೇಕೆ ?: ನಾನು ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರದ ಮಟ್ಟದಲ್ಲಿ, ಸಚಿವರೊಂದಿಗೆ ಚರ್ಚಿಸುವಾಗ ಸಚಿವರ ಬಾಯಿಂದ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕುರಿತು ಇಷ್ಟೊಂದು ರಾಜಕಾರಣ, ಪೈಪೋಟಿ ಏಕೆ ಎಂದು ಪ್ರಶ್ನಿಸುತ್ತಾರೆ. ತಾಲೂಕಿನಾದ್ಯಂತ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಂದ 25 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರು ಮಾಡುವ ಶಿಪಾರಸ್ಸು ಪತ್ರ ಬರೆಸಿಕೊಂಡು ಸಂಬಂಧಪಟ್ಟ ಇಲಾಖೆಗೆ ನೀಡಿದ್ದೆ. ಇದೀಗ ಆ ಪತ್ರವೇ ಕಾಣೆಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಲ್ಲಲ್ಲಿ ತಡೆಯೊಡ್ಡುವ ಕಾರ್ಯಗಳು ನಡೆದಿವೆ. ಯಾರಿಂದ ಎಂದು ನಾನು ಈಗ ಚರ್ಚಿಸುವುದಿಲ್ಲ. ನಿಮ್ಮೆಲ್ಲರ ಸಹಕಾರ ಇದ್ದರೆ ಶಕ್ತಿ ಮೀರಿ ಪ್ರಯತ್ನಿಸಿ ಸಮಸ್ಯೆಗೆಳ ಪರಿಹಾರಕ್ಕೆ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಮಕೃಷ್ಣ ಅತ್ತಿಕುಪ್ಪೆ, ಬೆಂಕಿಪುರ ಚಿಕ್ಕಣ್ಣ, ಮೋದೂರು ಶಿವಣ್ಣ, ಅಗ್ರಹಾರ ರಾಮೇಗೌಡ, ಪ್ರಕಾಶ್, ರಾಜು ಚಿಕ್ಕಹುಣಸೂರು, ಮಹದೇವಮ್ಮ, ಗೋಪಾಲ, ವಿ.ಬಸವರಾಜು ಕಲ್ಕುಣಿಕೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net