

ಶಿವಮೊಗ್ಗ: ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಪದಾಧಿಕಾರಿಗಳು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಲೇಜು ಶಿಕ್ಷಣ ಇಲಾಖೆ 2000ನೇ ಸಾಲಿನಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಬಂದಿದೆ. 2025ನೇ ಸಾಲಿನ ಸೆಮಿಸ್ಟರ್ ಅವಧಿಗೆ ಮಾತ್ರ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಲು ಆದೇಶ ಹೊರಡಿಸಿರುವುದು ಸೂಕ್ತವಲ್ಲ. ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದು, ಸಾವಿರಾರು ಅತಿಥಿ ಉಪನ್ಯಾಸಕರು ಕೌಶಲದೊಂದಿಗೆ ಪಾಠ ಮಾಡುತ್ತಿದ್ದಾರೆ. ಈಗ ಯುಜಿಸಿ 2018ರ ನಿಯಮಗಳು ಪೂರ್ವಾನ್ವಯ ಮಾಡುವುದರಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.
ಒಬ್ಬರಿಗಾಗಿ ಇನ್ನೊಬ್ಬರ ಬದುಕುವ ಹಕ್ಕು ಕಿತ್ತುಕೊಳ್ಳುವುದು ನ್ಯಾಯವಲ್ಲ. ರಾಜ್ಯದಲ್ಲಿ ಸುಮಾರು 6 ಸಾವಿರ ಅತಿಥಿ ಉಪನ್ಯಾಸಕರಿದ್ದು, ಅವರಲ್ಲಿ 3 ಸಾವಿರಕ್ಕೂ ಅಧಿಕ ಮಂದಿ 10 ವರ್ಷಗಳಿಗೂ ಹೆಚ್ಚು ಅವಧಿಯಿಂದ ಕೆಲಸ ಮಾಡುತ್ತಿದ್ದಾರೆ. ಹೊಸ ನಿಯಮಾವಳಿಯಿಂದ ಅವರೆಲ್ಲರೂ ಬೀದಿಪಾಲಾಗುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.
2025-26ನೇ ಸಾಲಿನ ಶೈಕ್ಷಣಿಕ ಅವಧಿಗೆ ಅತಿಥಿ ಉಪನ್ಯಾಸಕರನ್ನು ಬೇಷರತ್ತಾಗಿ ಕೆಲಸದಲ್ಲಿ ಮುಂದುವರಿಸಬೇಕು. ಅತಿಥಿ ಉಪನ್ಯಾಸಕರ ಉದ್ಯೋಗದ ಹಕ್ಕು ಸಂರಕ್ಷಣೆಗಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕು. ಯುಜಿಸಿ 2018ರ ನಿಯಮಾವಳಿಯನ್ನು 2018ರ ಪೂರ್ವದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರಿಗೆ ಅನ್ವಯಿಸಬಾರದು. ಅವರನ್ನೇ ಕೆಲಸದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಾ. ಸೋಮಶೇಖರ್ ಶಿಮೊಗ್ಗಿ, ಪ್ರಮುಖರಾದ ಕೆ.ಆರ್.ದಿವಾಕರ್, ರಾಜೇಶ್‌ಕುಮಾರ್, ನಾಗರಾಜು, ದೀಪಾ, ಡಾ. ರವೀಂದ್ರ ಇತರರಿದ್ದರು. ಪ್ರತಿಭಟನೆಗೆ ಡಿಎಸ್‌ಎಸ್ ಮುಖಂಡ ಟಿ.ಹಾಲೇಶಪ್ಪ, ಶಿವಕುಮಾರ್ ಗಸ್ತಿ ಬೆಂಬಲ ನೀಡಿದರು.