

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಂಬಂಧ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಉದಯಗಿರಿಯಲ್ಲಿ ದುಷ್ಕರ್ಮಿಗಳು ಪೊಲೀಸ್ ಠಾಣೆ, ಪೊಲೀಸರು ಹಾಗೂ ಪೊಲೀಸ್ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಮುಖರು ಮಂಗಳವಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ್ದ ಹಿನ್ನೆಲೆಯಲ್ಲಿ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಖಂಡಿಸಿ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಲಾಯಿತು. ಪೋಸ್ಟ್ ಹಾಕಿದ ಯುವಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ. ಆದರೂ ಕೆಲ ಮುಸ್ಲಿಂ ಯುವಕರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ ದೂರಿದರು.
ಸಮಾಜವನ್ನು ರಕ್ಷಣೆ ಮಾಡುವ ಪೊಲೀಸರಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರಿಗೆ ರಕ್ಷಣೆ ಇಲ್ಲದ ಮೇಲೆ ಅವರು ಸಾರ್ವಜನಿಕರನ್ನು ಹೇಗೆ ರಕ್ಷಿಸುತ್ತಾರೆ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಗಲಭೆ ಸೃಷ್ಟಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ ಗೂಂಡಾಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಮುಖರಾದ ದರ್ಶನ್, ರಾಹುಲ್ ಬಿದಿರೆ, ದೀನದಯಾಳ್, ಮೋಹನ್ ರೆಡ್ಡಿ, ಮಾಲತೇಶ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ್, ಚೈತ್ರಾ ನಾಯಕ್, ಸುರೇಖಾ ಪಾಲಾಕ್ಷಪ್ಪ, ಹರೀಶ್ ಇತರರಿದ್ದರು.