

ಶಿವಮೊಗ್ಗ: ಪ್ರತಿ ನಿತ್ಯ ಆಟೋ ಚಾಲನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ನಮಗೆ ಪೊಲೀಸರಿಂದ ಕಿರುಕುಳವಾಗುತ್ತಿದೆ. ಆಟೋ ಅಡ್ಡಗಟ್ಟಿ ದಂಡ ಹಾಕುತ್ತಿದ್ದಾರೆ. ದುಡಿದ ಹಣವೆಲ್ಲ ಇದಕ್ಕೆ ಸಾಲುತ್ತಿಲ್ಲ ಎಂದು ದೂರಿರುವ ಆಟೋ ಚಾಲಕರು ಬುಧವಾರ ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೊಲೀಸರು ನಮ್ಮೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಏಕವಚನದಲ್ಲಿ ಸಂಬೋಧಿಸುತ್ತಾರೆ. ನಾವೆಲ್ಲ ಮಾನಸಿಕವಾಗಿ ಘಾಸಿಗೊಂಡಿದ್ದೇವೆ. ಆತ್ಮಗೌರವ ಕಳೆದುಕೊಳ್ಳುವಂತಾಗಿದೆ. ಪೊಲೀಸರು ನಮ್ಮೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ನಗರದಲ್ಲಿ ಆಟೋಗಳ ಸಂಖ್ಯೆ ವಿಪರೀತವಾಗಿದೆ. ಹೊಸದಾಗಿ ಪರವಾನಗಿ ನೀಡುತ್ತಿರುವುದರಿಂದ ಆಟೋಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತಿದೆ. ಇದರಿಂದ ಯಾವ ಆಟೋ ಚಾಲಕರಿಗೂ ದುಡಿಮೆಯಾಗುತ್ತಿಲ್ಲ. ಅನಗತ್ಯ ಸ್ಪರ್ಧೆ ಉಂಟಾಗುತ್ತಿದೆ. ಆಟೋ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಸೈಯದ್ ಆದಿಲ್, ಪ್ರಮುಖರಾದ ನಾಸಿರ್ ಹುಸೇನ್, ತಬ್ರೇಜ್, ರಾಜು ಮತ್ತಿತರರಿದ್ದರು.