

ಶಿವಮೊಗ್ಗ: ಮಧ್ಯ ಕರ್ನಾಟಕ ಭಾಗದ ಜೀವನಾಡಿ ಆಗಿರುವ ಭದ್ರಾ ಜಲಾಶಯದ ಬಳಿ ಭದ್ರಾ ಬಲದಂಡೆ ಕಾಲುವೆಯನ್ನೇ ಒಡೆದು ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿ ಕೈಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸೋಮವಾರ ಜಲಾಶಯದ ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಇದೇ ವೇಳೆ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಆನಂತರ ಬಿಡುಗಡೆಗೊಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಜಾಕ್‌ವೆಲ್‌ಗೆ ಬಲದಂಡೆಯಿಂದ ಕಾಲುವೆ ಸೀಳಿ ನೀರು ಪೂರೈಸುವುದು ಸರಿಯಲ್ಲ. ಸರ್ಕಾರ ಯೋಜನೆಯನ್ನು ಕೈಬಿಟ್ಟು ಜಲಾಶಯದಿಂದಲೇ ನೇರವಾಗಿ ಅಥವಾ ಹೊಳೆಯಿಂದ ನೀರು ಪೂರೈಕೆ ಮಾಡಬೇಕೆಂದು ರೈತರು ಆಗ್ರಹಿಸಿದರು.
ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ 1,166 ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಭದ್ರಾ ಜಲಾಶಯದಿಂದ ನೀರು ಸರಬರಾಜು ಮಾಡಬೇಕಿದೆ. ಆದರೆ ಭದ್ರಾ ಜಲಾಶಯದಿಂದ ಜಾಕ್‌ವೆಲ್‌ಗೆ ನೀರು ಹರಿಸುವ ಬದಲು ಬಲದಂಡೆ ಕಾಲುವೆ ಸೀಳಿ ನೀರು ಹರಿಸುತ್ತಿರುವುದು ಅವೈಜ್ಞಾನಿಕ ಎಂದು ಕಿಡಿಕಾರಿದರು.
ರೇಣುಕಾಚಾರ್ಯ ಸೇರಿ ಹಲವರ ಬಂಧನ, ಬಿಡುಗಡೆ
ಭದ್ರಾ ಜಲಾಶಯದ ಬಲದಂಡೆ ನಾಲೆ ಒಡೆದು ಜಲಜೀವನ್ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾದ ದಾವಣಗೆರೆ ರೈತರನ್ನು ಶಿವಮೊಗ್ಗದ ಗಡಿ ಭಾಗದಲ್ಲೇ ತಡೆದ ಪೊಲೀಸರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಂಗೋಟೆ ರುದ್ರೇಶ್ ಸೇರಿ ಪ್ರಮುಖ ಹೋರಾಟಗಾರರನ್ನು ವಶಕ್ಕೆ ಪಡೆದರು. ಈ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು.