ಗೌರಿಬಿದನೂರು: ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದ ನಡುವೆಯೂ ವಾಟದಹೊಸಹಳ್ಳಿ ಕೆರೆ ನೀರು ನಗರಕ್ಕೆ ಹರಿಸುವ ಯೋಜನೆ ವಿರುದ್ಧ ನಡೆಸುತ್ತಿರುವ ಧರಣಿ ಮೂರನೇ ದಿನವೂ ಮುಂದುವರಿಯಿತು.
ಕೆರೆಯ ಅಚ್ಚುಕಟ್ಟುದಾರರು ಹಬ್ಬವನ್ನೂ ಲೆಕ್ಕಿಸದೆ ನಗರದ ತಾಲೂಕು ಕಚೇರಿಯ ಮುಂದೆ ಧರಣಿ ನಡೆಸಿ ನ್ಯಾಯಯುತ ಬೇಡಿಕೆ ಈಡೇರಿಸಿ, ಅವೈಜ್ಞಾನಿಕ ಯೋಜನೆ ಕೈಬಿಡುವಂತೆ ಆಗ್ರಹಿಸಿದರು. ನಗರಕ್ಕೆ ನೀರು ಹರಿಸಲು ಪರ್ಯಾಯ ಮಾರ್ಗಗಳಿವೆ. ರೈತರ ಹೋರಾಟವನ್ನೂ ಲೆಕ್ಕಿಸದೆ ವಾಟದಹೊಸಹಳ್ಳಿ ಕೆರೆಯಿಂದಲೇ ನೀರು ಹರಿಸಲು ಮುಂದಾಗಲು ಕಾರಣವೇನು? ಮಾಜಿ ಸಚಿವರು ಸೇರಿ ಪರಿಸರವಾದಿಗಳು, ಎತ್ತಿನಹೊಳೆ ಯೋಜನೆಯಿಂದ ನೀರು ಕೆರೆಗೆ ಬರುವುದಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಿದ್ದಾರೆ. ಸಮಗ್ರ ಚರ್ಚೆಗೆ ಮುಂದಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ಚರ್ಚೆ ನಡೆಸಿ, ಯೋಜನೆ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಾಳಪ್ಪ, ಮಧು,ಹರ್ಷವರ್ಧನ,ನರಸಿಂಹ ಮೂರ್ತಿ ಕೆಂಪುರಂಗಪ್ಪ, ವಿಜಯ್, ಮಂಜೇಶ್ ರೆಡ್ಡಿ, ದಿನೇಶ್, ಅಶ್ವತ್ಥಪ್ಪ, ಶಂಕರ್ ರೆಡ್ಡಿ, ರಮೇಶ್ ಭಾಗವಹಿಸಿದ್ದರು.