

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರನ್ನು ಅಮಾನತು ಮಾಡಿ ಆಡಳಿತಾಧಿಕಾರಿ ನೇಮಿಸಬೇಕೆಂದು ಆಗ್ರಹಿಸಿ ಮಂಗಳವಾರ ಕಸಾಪ ಸದಸ್ಯರು, ಸಾಹಿತ್ಯಾಸಕ್ತರು, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಬೆಂಬಲಿಗರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಂಸ್ಕೃತಿಯ ಪ್ರಾತಿನಿಧಿಕ ಸಂಸ್ಥೆ. ಆದರೆ ಮಹೇಶ್ ಜೋಶಿ ಅಧ್ಯಕ್ಷರಾದ ಬಳಿಕ ಇದರ ಸ್ವರೂಪ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕು. ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೈಲಾ ತಿದ್ದುಪಡಿ ಮಾಡಿ ಪ್ರಮುಖ ವಿಷಯಗಳ ಬಗ್ಗೆ ನಿರ್ಣಯ ಮಾಡುವ ಅಧಿಕಾರವನ್ನು ಕಾರ್ಯಕಾರಿ ಸಮಿತಿಗೆ ನೀಡುವ ಬದಲು ಕೇಂದ್ರ ಸಮಿತಿ ಅಧ್ಯಕ್ಷರಿಗೆ ನೀಡುವ ಮೂಲಕ ಮಹೇಶ್ ಜೋಶಿ ಹುನ್ನಾರ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಏ.27ಕ್ಕೆ ಕರೆದಿರುವ ಸರ್ವ ಸದಸ್ಯರ ಸಭೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಸಮರ್ಪಕವಾಗಿ ಲೆಕ್ಕಪತ್ರಗಳನ್ನು ನೀಡದೆ, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಗಳಿಗೆ ನೆರವು ನೀಡದೇ ಸಾಹಿತ್ಯ ಕ್ಷೇತ್ರದ ಅವನತಿಗೆ ಕಾರಣವಾಗುತ್ತಿದ್ದಾರೆ. ಕೂಡಲೇ ಸಮರ್ಪಕ ಅನುದಾನ ನೀಡಬೇಕು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಚುನಾಯಿತ ಅಧ್ಯಕ್ಷರಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಅಮಾನತು ಮಾಡುವುದಕ್ಕೆ, ಸದಸ್ಯತ್ವ ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಕ್ಷುಲ್ಲಕ ಕಾರಣಕ್ಕೆ ಮಂಜುನಾಥ್ ಅವರಿಗೆ ನೋಟಿಸ್ ನೀಡಿರುವುದು ಖಂಡನೀಯ. ಇಂತಹ ಸರ್ವಾಧಿಕಾರಿ ಧೋರಣೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಸಾಹಿತಿಗಳಾದ ಕುಂ.ವೀರಭದ್ರಪ್ಪ, ಬಿ.ಚಂದ್ರೇಗೌಡ, ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್, ವಕೀಲ ಕೆ.ಪಿ.ಶ್ರೀಪಾಲ್, ಪ್ರಮುಖರಾದ ಶಂಕರಘಟ್ಟ ರಮೇಶ್, ಹುಚ್ರಾಯಪ್ಪ, ಅಕ್ಷತಾ ಹುಂಚದಕಟ್ಟೆ, ಕೆ.ಎಲ್.ಅಶೋಕ್, ಡಾ.ಶೇಖರ್‌ಗೌಳೇರ್, ರತ್ನಯ್ಯ, ರಘು ಶಿಕಾರಿಪುರ, ನಾಗರಾಜ್, ಶಿವಲಿಂಗಪ್ಪ, ಮೋಹನ್‌ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.