

ವಿಜಯವಾಣಿ ಸುದ್ದಿಜಾಲ ಶಿರಾ
ನಿಗದಿತ ಸಮಯಕ್ಕೆ ಕೆಎಸ್ಆರ್ಟಿಸಿ ಬಸ್ ಬಾರದಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಶಿರಾ ಡಿಪೋ ಮುಂದೆ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾವರೆಕೆರೆಯಿಂದ ಹೊಸೂರು, ಗೌಡಗೆರೆ ಹೋಬಳಿ, ರಂಗನಹಳ್ಳಿ ಭೂತಪ್ಪನ, ದ್ವಾರಳು, ಭೂತಪ್ಪನಗುಡಿ, ಕಳುವರಹಳ್ಳಿ, ಹೊಸಹಳ್ಳಿ, ಸೇರಿ ತಾವರೆಕೆರೆ ಗ್ರಾಮಕ್ಕೆ ಹೊಂದಿಕೊಂಡಿರುವ ಬಹುತೇಕ ಗ್ರಾಮಗಳಿಂದ ಹೊಸೂರು ಗ್ರಾಮದಲ್ಲಿರುವ "ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ "ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ನಿತ್ಯ ನೂರಾರು ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು, ಸಂಜೆ 4.30.ಕ್ಕೆ ಶಾಲೆ ಬಿಟ್ಟ ಬಳಿಕ ಎರಡು ಗಂಟೆ ರಸ್ತೆಯಲ್ಲೇ ಕಾಯ್ದು, 6.30ಕ್ಕೆ ಬಸ್ ಹತ್ತಿ ಗ್ರಾಮಗಳಿಗೆ ವಾಪಾಸ್ ತಲುಪಲು ರಾತ್ರಿ 7 ಗಂಟೆ ಸಮಯ ಬೇಕಾಗುತ್ತದೆ. ನಮ್ಮ ಗೋಳನ್ನು ಯಾರು ಕೇಳುತ್ತಾರೆ ? ಎಂದು ಶಾಲಾ ವಿದ್ಯಾರ್ಥಿಗಳು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದೂವರೆ ವರ್ಷದಿಂದ ಪ್ರತಿ ದಿನ ಬಸ್ಗಾಗಿ ಪರದಾಡುತ್ತಿದ್ದೇವೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಕೂಡಲೇ ಶಾಸಕರು ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ವಿದ್ಯಾರ್ಥಿಗಳು ಸಂಜೆ 5 ಗಂಟೆಗೆ ನಿಯಮಿತವಾಗಿ ಬಸ್ ಸಂಚರಿಸಬೇಕು ಎಂದು ಮನವಿ ಸಲ್ಲಿಸಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. | ಮಂಜುನಾಥ್, ಡಿಪೋ ಮ್ಯಾನೇಜರ್, ಶಿರಾ