

ಶಿವಮೊಗ್ಗ: ಕಾಡಾನೆ ಉಪಟಳದಿಂದ ಹಾನಿಗೊಳಗಾದ ಭತ್ತ, ಅಡಕೆ ಸಸಿ, ಬಾಳೆ, ಕಬ್ಬು ಹಾಗೂ ಮೆಕ್ಕೆಜೋಳ ಫಸಲನ್ನು ತಂದು ಶಿವಮೊಗ್ಗ ವನ್ಯಜೀವಿ ವಲಯದ ಉಪಸಂರಕ್ಷಣಾಧಿಕಾರಿ ಕಚೇರಿ ಎದುರು ಸುರಿದು ಪುರದಾಳು ಗ್ರಾಮದ ರೈತರು ಮಂಗಳವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಹಲವು ತಿಂಗಳಿನಿಂದ ಕಾಡಾನೆಗಳ ಹಿಂಡು ಹೊಲ, ಗದ್ದೆಗಳ ಮೇಲೆ ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡುತ್ತಿವೆ. ಕೆಲವು ದಿನಗಳಿಂದ ಊರಿನ ಒಳಗೂ ಪ್ರವೇಶ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಲಿನ ಪುರದಾಳು, ಬೇಳೂರು, ಕೌಲಾಪುರ ಸೇರಿ ಹಲವೆಡೆ ದಿನನಿತ್ಯ ಹೊಲಗಳಿಗೆ ದಾಳಿ ನಡೆಸುತ್ತಿದ್ದು, ರೈತರು ನಷ್ಟ ಅನುಭವಿಸುಂತಾಗಿದೆ. ಆಲದೇವರ ಹೊಸೂರಿನಲ್ಲಿ ಕೂಲಿ ಕಾರ್ಮಿಕ ಹನುಮಂತ ಆನೆ ದಾಳಿಯಿಂದ ಮೃತಪಟ್ಟ ಘಟನೆ ನೆನಪು ಮಾಸುವ ಮುನ್ನವೇ ಕಾಡಾನೆಗಳು ಗ್ರಾಮದೊಳಗೆ ನುಗ್ಗುತ್ತಿವೆ. ಇದರಿಂದ ಜನರು ಆತಂಕದಲ್ಲಿ ಓಡಾಡಬೇಕಿದೆ. ಮೂರ್ನಾಲ್ಕು ವರ್ಷಗಳಿಂದ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಆನೆಗಳನ್ನು ತಡೆಯಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಪುರದಾಳು ಗ್ರಾಪಂ ಉಪಾಧ್ಯಕ್ಷ ಪ್ರದೀಪ್ ಎಸ್. ಹೆಬ್ಬೂರು, ಸದಸ್ಯರಾದ ಮಾನಸಾ, ಕುಸುಮಾ, ಗ್ರಾಮಸ್ಥರಾದ ಪ್ರಭಾಕರ್ ಸಂಪೋಡಿ, ಅಶೋಕ್, ಗೋಪಾಲ್, ಮುಕುಂದಪ್ಪ ಕಿಡದುಂಬೆ, ಮುಕುಂದ, ಕೃಷ್ಣಮೂರ್ತಿ, ನಾಗರಾಜ್ ಇತರರಿದ್ದರು.