ಶಾಸಕ ಮುನಿರತ್ನ ವಿರುದ್ಧ ಸಚಿವ, ಶಾಸಕರಿಂದ ಪ್ರತಿಭಟನೆ

mla
Published on


ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿದಿದೆ. ಬುಧವಾರ ಕೆಂಗೇರಿಯಲ್ಲಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಗುರುವಾರ ಕೆಪಿಸಿಸಿ ಮುಂದೆ ಬೆಂಗಳೂರು ವ್ಯಾಪ್ತಿಯ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆ ನಡೆಸುವರು.
ಬಿಜೆಪಿಯ ಶಾಸಕ ಮುನಿರತ್ನಂ ನಾಯ್ಡು ಅವರು ದಲಿತರು ಹಾಗೂ ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಸ್ಯಾಟಲೈಟ್ ಟೌನ್‌ನ ಹೊಯ್ಸಳ ಸರ್ಕಲ್ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಸಚಿವ ಕೃಷಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ತಿನ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ವಿಶೇಷವೆಂದರೆ ಬಿಜೆಪಿ ಶಾಸಕ ಸೋಮಶೇಖರ್ ಕೂಡ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ನಿಯೋಗ ಭೇಟಿ
ಮುನಿರತ್ನ ವಿಚಾರವಾಗಿ ಒಕ್ಕಲಿಗ ನಾಯಕರ ನಿಯೋಗ ಗುರುವಾರ (ಸೆ.18) ಸಂಜೆ ಸಮಯ ನೀಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮುನಿರತ್ನ ಪ್ರಕರಣದಲ್ಲಿ ಅಶೋಕ್ ಹಾಗೂ ಬೇರೆಯವರ ನುಡಿಮುತ್ತುಗಳನ್ನು ಗಮನಿಸಿದ್ದೀರಿ. ಇದರ ಬಗ್ಗೆ ಆನಂತರ ಮಾತನಾಡುತ್ತೇನೆ ಎಂದರು.
ದೇವೇಗೌಡರೇ ಒಕ್ಕಲಿಗರ ಸರ್ವೋಚ್ಚ ನಾಯಕ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶದ ಪ್ರಧಾನಿಗಳಾಗಿದ್ದ ದೇವೇಗೌಡರನ್ನು ಸರ್ವೋಚ್ಚ ನಾಯಕರಲ್ಲ ಎಂದು ನಾವು ಹೇಳಿಲ್ಲ. ಅವರನ್ನು ನಾವು ನಾಯಕರಲ್ಲ ಎಂದು ಹೇಳಲು ಸಾಧ್ಯವೇ? ದೇವೇಗೌಡರನ್ನು ದೇಶದ ಪ್ರಧಾನಿಗಳನ್ನಾಗಿ ಮಾಡಿದ್ದೇ ಕಾಂಗ್ರೆಸ್. ಬಿಜೆಪಿ ಅವರಿಗೆ ಸ್ಥಾನ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಯಡಿಯೂರಪ್ಪ, ಆರ್. ಅಶೋಕ್ ಏನೇನು ಮಾತನಾಡಿದ್ದರು? ಸುಮ್ಮನೆ ಸಮಯಕ್ಕೆ ತಕ್ಕಂತೆ ಮಾತನಾಡುವುದಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net