ಹೆಬ್ಬಲಗುಪ್ಪೆ ಗ್ರಾಮಸ್ಥರಿಂದ ಪ್ರತಿಭಟನೆ

೨೮ ಎಚ್ಡಿಕೆ ೦೧ (1)
Published on

ಎಚ್.ಡಿ.ಕೋಟೆ: ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದಲ್ಲಿ ಕಾಯದರ್ಶಿ ವಿರೂಪಾಕ್ಷ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ತನಿಖೆಯಾಗಬೇಕೆಂದು ಒತ್ತಾಯಿಸಿ ಸಂಘದ ನಿರ್ದೇಶಕರು ಹಾಗೂ ರೈತರು ಮಂಗಳವಾರ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಡಿ.31ರಂದು ಸಂಘದ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ವಿರೂಪಾಕ್ಷ ಅವರ ರಾಜೀನಾಮೆಯನ್ನು ಅಧ್ಯಕ್ಷರು ಅನುಮೋದಿಸಿದ್ದರು. ನಂತರ ಜ.14ರಂದು ಸಂಘದ ಸಭೆ ಕರೆದು ನಿರ್ದೇಶಕರ ಸಮ್ಮುಖದಲ್ಲಿ ಸಂಘಕ್ಕೆ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿತ್ತು. ಆದರೆ ವಿರೂಪಾಕ್ಷ ಅವರು ನೂತನ ಕಾರ್ಯದರ್ಶಿಗೆ ಸಂಘದ ದಾಖಲೆ ಪತ್ರಗಳು ಮತ್ತು ಜವಾಬ್ದಾರಿಯನ್ನು ಹಸ್ತಾಂತರ ಮಾಡದೆ ಸಹಕಾರ ಸಂಘದ ನಿಯಮಾವಳಿಯನ್ನು ಉಲ್ಲಂಘನೆ ಮಾಡಿ, ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಸಂಘದ ಚಾಮುಂಡನಾಯಕ ಮಾತನಾಡಿ, 10 ವರ್ಷಗಳಿಂದ ಸಂಘದ ಕಾರ್ಯದರ್ಶಿ ವಿರೂಪಾಕ್ಷ ಅವರು ಹಲವು ಲೋಪ ಗಳನ್ನು ಎಸಗಿದ್ದಾರೆ. ಹೀಗಾಗಿ ಈ ಹಿಂದೆ ಸಭೆ ಕರೆದು ಅವರನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿರೂಪಾಕ್ಷ ಅವರು ಸ್ವಯಂ ಪ್ರೇರಿತವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಈಗ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದು, ಅಧಿಕಾರಿಗಳು ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರೈತ ಚಿಕ್ಕದಾಸ ನಾಯಕ ಮಾತನಾಡಿ, ಸಾಲ ಮಂಜೂರು ಮಾಡಲು ವಿರೂಪಾಕ್ಷ ಅವರು ರೈತರಿಂದ ತಲಾ 2 ಸಾವಿರ ರೂ.ನಿಂದ 3 ಸಾವಿರ ರೂ.ವರೆಗೆ ಹಣ ಪಡೆದಿದ್ದಾರೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಸಿದ್ದನಾಯಕ, ಚಿಕ್ಕನಾಯಕ, ಕುಳ್ಳನಾಯಕ, ದಾಸಪ್ಪ ನಾಯಕ, ವೆಂಕಟೇಶ, ಬೈರಪ್ಪ, ಕೃಷ್ಣಶೆಟ್ಟಿ, ಶಿವಪ್ಪ, ರಮೇಶ್ ಇದ್ದರು.
 
ನಿಯಮಾವಳಿ ಪ್ರಕಾರ ಸಹಕಾರದ ಸಂಘದ ಸಭೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಭೆ ಕರೆದು ಆ ಸಭೆಯಲ್ಲಿ ಕಾರ್ಯದರ್ಶಿ ರಾಜೀನಾಮೆ ನೀಡಬೇಕು. ಆದರೆ ಸಂಘದ ಅಧ್ಯಕ್ಷರು ಸಭೆ ಕರೆದು ಕಾರ್ಯದರ್ಶಿ ಅವರಿಂದ ರಾಜೀನಾಮೆ ಪಡೆದಿದ್ದಾರೆ. ಆದರೆ ಇದು ಸಹಕಾರ ಸಂಘದ ನಿಯಮಕ್ಕೆ ವಿರುದ್ಧವಾಗಿ ಇರುವುದರಿಂದ ಅವರ ರಾಜೀನಾಮೆ ಅಂಗೀಕಾರ ಮಾಡಲು ಬರುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನಿಯಮಾವಳಿ ಪ್ರಕಾರ ಸಭೆ ಕರೆದು ಕಾರ್ಯದರ್ಶಿ ವಿರುದ್ಧ ಕ್ರಮ ವಹಿಸಲು ಸಹಕಾರ ಸಂಘಕ್ಕೆ ಪತ್ರ ಬರೆಯಲಾಗುವುದು.
ಗೋಪಾಲಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಹುಣಸೂರು ಉಪ ವಿಭಾಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net