ಹೆದ್ದಾರಿಯ ಗುಂಡಿಗಳನ್ನು ಮುಚ್ಚಿ ಪ್ರತಿಭಟನೆ

hos road
ನಗರ-ಚಿಕ್ಕಪೇಟೆ ಕ್ರಾಸ್ ಬಳಿ ರಸ್ತೆಯಲ್ಲಿ ಯುವಕರು ಗುಂಡಿಗಳನ್ನು ಮುಚ್ಚುತ್ತಿರುವುದು.
Published on

ಹೊಸನಗರ: ತಾಲೂಕಿನ ನಗರ-ಚಿಕ್ಕಪೇಟೆ ಹೆದ್ದಾರಿ ಗುಂಡಿಮಯವಾಗಿದೆ. ಚಿಕ್ಕಪೇಟೆಯ ಕೆಲ ಯುವಕರು ಗುಂಡಿಗಳನ್ನು ಮುಚ್ಚುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.

ಹೊಸನಗರದಿಂದ ಕೊಲ್ಲೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ನಗರದಿಂದ ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ತೆರಳುವ ಮಾರ್ಗದಲ್ಲಿ ಆಗಿರುವ ದೊಡ್ಡ ಗಾತ್ರದ ಹೊಂಡ, ಗುಂಡಿಗಳಿಂದ ಸಂಚಾರಕ್ಕೆ ಕಷ್ಟವಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ದೊಡ್ಡ ಗುಂಡಿಗಳನ್ನು ಗಮನಿಸದೆ ವಾಹನ ಚಲಾಯಿಸಿದರೆ ಅಪಘಾತ ನಿಶ್ಚಿತ. ರಸ್ತೆ ಹದಗೆಟ್ಟಿರುವುದರಿಂದ ನಿರಂತರವಾಗಿ ಅಪಘಾತಗಳು ಆಗುತ್ತಲೇ ಇವೆ. ಹಿರಿಯರು, ಅನಾರೋಗ್ಯ ಪೀಡಿತರು ಈ ಭಾಗದಲ್ಲಿ ಓಡಾಡದಂತಾಗಿದೆ ಎಂದು ದೂರಿದರು.

ಚಿಕ್ಕಪೇಟೆ ಯುವಕರು ಒಂದಷ್ಟು ಗುಂಡಿಗಳಿಗೆ ಜಲ್ಲಿಕಲ್ಲು-ಮಣ್ಣು ತುಂಬಿ ಶ್ರಮದಾನದ ಮೂಲಕ ಪ್ರತಿಭಟಿಸಲಾಗಿದೆ. ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲಾ ಕ್ರಾಸ್, ಚಿಕ್ಕಪೇಟೆ ಸರ್ಕಲ್, ಸೊಸೈಟಿ ಸರ್ಕಲ್ ಬಳಿ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನಾದರೂ ಗಮನಹರಿಸಿ ಸಂಚಾರ ಸುಗಮಗೊಳಿಸಲಿ ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ಸುಧೀಂದ್ರ ಪಂಡಿತ್, ಎಸ್.ಕೆ.ನವೀನ್, ಸಿ.ಡಿ.ರಾವ್, ಆಟೋ ಪ್ರಶಾಂತ್, ಎನ್.ಎಸ್.ಹರೀಶ್, ಚಕ್ರಾ ರವಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net